Friday, May 10, 2024

ಹೇಗಿದೆ ಶಿವಾಜಿ ಸುರತ್ಕಲ್-2? : ರಮೇಶ್ ಅವರಲ್ಲಿರೋ ಮತ್ತೊಬ್ಬ’ರಾಕ್ಷಸ’ನಿಗೆ ಪ್ರೇಕ್ಷಕ ಕೊಟ್ಟ ಮಾರ್ಕ್ಸ್ ಎಷ್ಟು?

ಬೆಂಗಳೂರು : ದಿ ವೆಯ್ಟ್ ಈಸ್ ಓವರ್. ಶಿವಾಜಿ ರಿಟರ್ನ್ಸ್. ಮೂರು ವರ್ಷದ ಹಿಂದೆ ರಣಗಿರಿ ರಹಸ್ಯ ಭೇದಿಸಿದ್ದ ಎಸಿಪಿ ಶಿವಾಜಿ ಸುರತ್ಕಲ್, ಇದೀಗ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿಯನ್ನು ಭೇದಿಸಲು ಬಂದಿದ್ದಾರೆ. ರಮೇಶ್ ಅರವಿಂದ್ ಪರ್ಫಾಮೆನ್ಸ್ ಜೊತೆ ಕಥೆಯಲ್ಲಿ ಎಷ್ಟು ಧಮ್ ಇದೆ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಬಳಿಕ ಪ್ರೇಕ್ಷಕಪ್ರಭು ಹೇಳಿದ್ದೇನು? ಈ ಎಲ್ಲದರ ಕುರಿತ ಕಂಪ್ಲೀಟ್ ರಿಪೋರ್ಟ್​ ಇಲ್ಲಿದೆ ನೋಡಿ.

ಫ್ರಾಂಚೈಸ್ ಸಿನಿಮಾಗಳು ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿವೆ. ಬಾಹುಬಲಿ, ಕೆಜಿಎಫ್ ಸಿನಿಮಾಗಳಂತೆ ಶಿವಾಜಿ ಸುರತ್ಕಲ್ ಕೂಡ ಸಖತ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಡೈರೆಕ್ಷನ್ ಸ್ಕಿಲ್ಸ್ ನಿಜಕ್ಕೂ ಭೇಷ್ ಅನ್ನುವಂತಿದೆ. ಮೂರು ವರ್ಷದ ಹಿಂದೆ ಶಿವಾಜಿ ಸುರತ್ಕಲ್​ ಭಾಗ ಒಂದನ್ನು ರಣಗಿರಿ ರಹಸ್ಯದ ಕೇಸ್ ಮೂಲಕ ಪ್ರಸ್ತುತ ಪಡಿಸಿದ್ದರು. ಈಗ 131ನೇ ಮಾಯಾವಿ ಕೇಸ್​ನಿಂದ ಮತ್ತೆ ವಾಪಸ್ ಆಗಿದ್ದಾರೆ ಎಸಿಪಿ ಶಿವಾಜಿ ಸುರತ್ಕಲ್.

ಇದು ರಮೇಶ್ ಅರವಿಂದ್​ರ 103ನೇ ಸಿನಿಮಾ. ಯಲ್ಲಾಪುರ, ಕಾಪು, ದಕ್ಷಿಣ ಕನ್ನಡ, ಸುರತ್ಕಲ್ ಸೇರಿದಂತೆ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರಿಸಲಾಗಿದ್ದು, ಎಂದಿನಂತೆ ಸೀರಿಯಲ್ ಕಿಲ್ಲರ್​ನ ಹುಡುಕೋ ಕಾರ್ಯಚರಣೆ ಶಿವಾಜಿಯದ್ದು. ಆರಂಭದಲ್ಲೇ ಪತ್ನಿ ಜನನಿ ಸ್ನೇಹಿತೆಯ ಮಗಳನ್ನು ದತ್ತು ಪಡೆಯೋ ಶಿವಾಜಿ, ಆಕೆಯ ಸಾವು ಹಿಟ್ ಅಂಡ್ ರನ್ ಅಂತ ಭಾವಿಸಿರ್ತಾರೆ. ಆಕೆಗೆ ಆಪತ್ತು ಬಾರದಂತೆ ಸ್ವಂತ ಮಗಳಾಗಿ ಬೆಳೆಸುತ್ತಾರೆ.

ಇದೇ ಚಿತ್ರಕಥೆಯ ಅಸಲಿ ಮಿಸ್ಟರಿ

ಅಷ್ಟರಲ್ಲೇ ಡಿಸಿಪಿ ದೀಪಾ ಕಾಮತ್ ನೀಡೋ ಕೇಸ್​ನ ಡೀಲ್ ಮಾಡೋಕೆ ಹೋದ ಶಿವಾಜಿಗೆ ಒಂದು ಪ್ಯಾಟ್ರನ್ ಸಿಗುತ್ತೆ. ಲಾಯರ್, ಡಾಕ್ಟರ್, ಪೊಲೀಸ್ ಆಫೀಸರ್ ಹಾಗೂ ಜರ್ನಲಿಸ್ಟ್ ಮಕ್ಕಳ ಸರಣಿ ಕೊಲೆಗಳಿಗೂ ಕೊಲೆಗಾರನಿಗೂ ಒಂದು ಲಿಂಕ್ ಇರುತ್ತೆ. ಇಷ್ಟಕ್ಕೂ ಆ ಕೊಲೆಗಾರ ಯಾರು? ತಾನೇ ಸಾಕಿದಂತಹ ಆ ಮಗುವಿಗೂ ಕೊಲೆಗಾರನಿಗೂ ಏನು ಸಂಬಂಧ ಅನ್ನೋದೇ ಚಿತ್ರಕಥೆಯ ಅಸಲಿ ಮಿಸ್ಟರಿ.

ಇದನ್ನೂ ಓದಿ : ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ‘ಹೊಯ್ಸಳ’ ಟಿಕೆಟ್ ದರದಲ್ಲಿ ಡಿಸ್ಕೌಂಟ್..!

ಖಾಕಿ ಖದರ್ ನಲ್ಲಿ ಮೇಘನಾ ಮಿಂಚು

ಡಿಟೆಕ್ಟೀವ್ ಶಿವಾಜಿ ಸುರತ್ಕಲ್​ ಜೊತೆ ಗೋವಿಂದ ಪಾತ್ರದಲ್ಲಿ ರಾಘು ರಮಣಕೊಪ್ಪ ಮಸ್ತ್ ಮಜಾ ಕೊಡಲಿದ್ದಾರೆ. ಸೀರಿಯಸ್ ಕಥೆಯ ನಡುವೆ ನಗುವಿನ ಅಲೆ ಮೂಡಿಸ್ತಾರೆ. ಇನ್ನು ನಾಸರ್ ಹಾಗೂ ರಮೇಶ್ ಅರವಿಂದ್ ನಡುವಿನ ತಂದೆ-ಮಗನ ಬಾಂಧವ್ಯ ಅದ್ಭುತ. ಬೇಬಿ ಆರಾಧ್ಯ ಹಾಗೂ ರಮೇಶ್ ನಡುವಿನ ತಂದೆ-ಮಗಳ ಸಂಬಂಧ ಕೂಡ ಅನನ್ಯ. ಆಗಾಗ ಜನನಿಯಾಗಿ ಜೀ ಅಂತ ಬರೋ ರಾಧಿಕಾ ಚೇತನ್, ಮೇಘನಾ ಗಾಂವ್ಕರ್ ಖಾಕಿ ಖದರ್, ಶೋಭರಾಜ್ ಹೀಗೆ ಎಲ್ಲಾ ಪಾತ್ರಗಳು ನೋಡುಗರ ಮನದಲ್ಲಿ ಉಳಿಯಲಿವೆ.

ರಮೇಶ್ ಅವರಲ್ಲಿರೋ ಮತ್ತೊಬ್ಬ ‘ರಾಕ್ಷಸನ ದರ್ಶನ’

ಜೂಡಾ ಸ್ಯಾಂಡಿ ಬ್ಯಾಗ್ರೌಂಡ್ ಸ್ಕೋರ್, ಗುರು ಪ್ರಸಾದ್ ಹಾಗೂ ದರ್ಶನ್ ಅವರ ಕ್ಯಾಮೆರಾ ಕೈಚಳಕ, ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಮಾಡಿರೋ ಶಾರ್ಪ್​ ಎಡಿಟಿಂಗ್ ಹೀಗೆ ಎಲ್ಲವೂ ಚಿತ್ರದ ಗಮ್ಮತ್ತು ಹೆಚ್ಚಿಸಿದೆ. ನಿರ್ದೇಶಕ ಹೇಳುವ ಅಗ್ನಿಪುರಾಣದ ಕಥೆ. ಅದರಿಂದ ದ್ವೇಷ ತೀರಿಸಿಕೊಳ್ಳಲು ಡಾ. ಪ್ರತಾಪ್ ಆಗಿ ಬರೋ ಪ್ರೊಫೆಸರ್ ರುದ್ರ. ರಮೇಶ್ ಅರವಿಂದ್​ ಹಾಗೂ ಅವರಲ್ಲಿರೋ ಮತ್ತೊಬ್ಬ ರಾಕ್ಷಸ ಹೀಗೆ ಎಲ್ಲವೂ ನೋಡುಗರನ್ನು ಸೀಟ್ ಅಂಚಿನಲ್ಲಿ ಕೂರಿಸುತ್ತದೆ. ಒಟ್ಟಾರೆ ಶಿವಾಜಿ ಸುರತ್ಕಲ್-2ಗೆ ಪವರ್ ಟಿವಿ ರೇಟಿಂಗ್ ಐದಕ್ಕೆ ನಾಲ್ಕು ಸ್ಟಾರ್.

ಶಿವಾಜಿ ಸುರತ್ಕಲ್-3 ಫಿಕ್ಸ್?

ವೀರೇಶ್ ಥಿಯೇಟರ್​ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಾಲೇಜ್ ಸ್ಟೂಡೆಂಟ್ಸ್​ನಿಂದ ಫ್ಯಾಮಿಲಿ ಆಡಿಯೆನ್ಸ್​ವರೆಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿದ ಚಿತ್ರತಂಡ, ಎಲ್ಲೆಡೆಯಿಂದ ಬರ್ತಿರೋ ರೆಸ್ಪಾನ್ಸ್​ಗೆ ದೀಲ್​ಖುಷ್ ಆಗಿದೆ.

ಒಟ್ಟಾರೆ, ಜನರ ರೆಸ್ಪಾನ್ಸ್​ ನೋಡಿ ಥ್ರಿಲ್ ಆದಂತಹ ನಿರ್ದೇಶಕ ಹಾಗೂ ನಿರ್ಮಾಪಕರು, ಶಿವಾಜಿ ಸುರತ್ಕಲ್-3 ಮಾಡೋದಾಗಿ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES