Friday, May 3, 2024

ಇಂದು ಪ್ರಹ್ಲಾದ್ ಜೋಶಿ, ಗೀತಾ ಶಿವರಾಜ್​ ಕುಮಾರ್​ ಸೇರಿ ಘಟಾನುಗಳಿಂದ ನಾಮಪತ್ರ ಸಲ್ಲಿಕೆ

ಲೋಕಸಭೆ ಚುನಾವಣೆ ಹಿನ್ನೆಲೆ ಧಾರವಾಡ, ಶಿವಮೊಗ್ಗ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ನಿಂತಿರುವ ಹಲವು ಘಟಾನುಘಟಿಗಳು ಇಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್‌ ಜೋಶಿ ಇಂದು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇವರಿಗೆ ಸಾಥ್​ ನೀಡಲು ಹಿರಿಯ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪ್ರಭಾಕರ ಕೋರೆ, ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಮಪತ್ರ ಸಲ್ಲಿಕೆಗೆ ಆಗಮಿಸಲಿದ್ದಾರೆ.

ಧಾರವಾಡದ ಶಿವಾಜಿ ಸರ್ಕಲ್‌ನಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭಿಸಿ, ಡಿಸಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ಸಾಗಿ 11 ಗಂಟೆಗೆ ನಾಮಪತ್ರ ಸಲ್ಲಿಸಲು ಜೋಶಿ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯ ನಾಯಕರ ಜೊತೆಗೆ ಸ್ಥಳೀಯ ಬಿಜೆಪಿ ಶಾಸಕರೂ ಜೋಶಿಯವರಿಗೆ ಸಾಥ್‌ ನೀಡಲಿದ್ದಾರೆ.

ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಮೋದಿಯ ಪಿಕ್​ನಿಕ್​ ಫೋಟೋಗಳು ಬಿಟ್ಟರೆ ಬೇರೆ ಏನು ಇಲ್ಲ: ಸಚಿವ ಪ್ರಿಯಾಂಕ್​ ಖರ್ಗೆ

ಚಿಕ್ಕೋಡಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಾಸಾಹೇಬ ಜೊಲ್ಲೆಯವರು ಬಿಜೆಪಿ ನಾಯಕರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಬೈರತಿ ಬಸವರಾಜ ಸೇರಿದಂತೆ ವಿವಿಧ ಮುಖಂಡರು ಸಾಥ್‌ ನೀಡಲಿದ್ದಾರೆ. 11 ಗಂಟೆಗೆ ಚಿಕ್ಕೋಡಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನವೂ ನಡೆಯಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ನಿಂದ ಇಳಿದಿರುವ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ನಾಮಿನೇಷನ್‌ ಫೈಲ್‌ ಮಾಡಲಿದ್ದಾರೆ. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್‌ ನೀಡುವ ಸಾಧ್ಯತೆ ಇದೆ. ಮಧ್ಯಾಹ್ನ 1.30ಕ್ಕೆ ಶಿವಮೊಗ್ಗಕ್ಕೆ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ಪತಿ, ನಟ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ ಹಾಗೂ ಕುಟುಂಬ ಸದಸ್ಯರು ಸಾಥ್ ನೀಡಲಿದ್ದಾರೆ. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ನಗರದ ಮಹಾವೀರ ವೃತ್ತದಲ್ಲಿ ಬೃಹತ್ ಮೆರವಣಿಗೆ ಕೊನೆಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಗುರುದತ್ ಹೆಗಡೆ ಅವರಿಗೆ ಗೀತಾ ಸಲ್ಲಿಸಲಿದ್ದಾರೆ.

RELATED ARTICLES

Related Articles

TRENDING ARTICLES