Friday, May 10, 2024

ಸ್ವಂತ ಬೈಕ್​,ಕಾರು, ಮನೆಯಿಲ್ಲದ ತೇಜಸ್ವಿ ಸೂರ್ಯ : ಒಟ್ಟು 4.10 ಕೋಟಿ ಆಸ್ತಿ ಒಡೆಯ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಳಿ ಸ್ವಂತ ಕಾರು, ಬೈಕು ಮನೆ ಸೇರಿ ಯಾವುದೇ ಸ್ಥಿರಾಸ್ತಿ ಇಲ್ಲ. ಅವರ ಒಟ್ಟು ಆಸ್ತಿಯ ಮೌಲ್ಯ 4.10 ಕೋಟಿ ರೂ. ಇದೆ 

ಕಳೆದ ಬಾರಿ 13.46 ಲಕ್ಷ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದ ತೇಜಸ್ವಿ ಸೂರ್ಯ ಆಸ್ತಿ ಮೌಲ್ಯದಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಇದೆಲ್ಲವೂ ಬಹುತೇಕ ಹೂಡಿಕೆಯಿಂದಲೇ ಬಂದಿರುವುದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸ್ವಂತ ಮನೆಯಿಲ್ಲ, ಕಾರು, ದ್ವಿಚಕ್ರ ವಾಹನ ಕೂಡ ಇಲ್ಲ ಎನ್ನುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. ಆದರೆ, ಒಟ್ಟು 4.10 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

ಕೈಯಲ್ಲಿ ನಗದು 80 ಸಾವಿರ ರೂ.ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ, 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳು, ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ರೂ. ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ ವಿವಿಧ ವಿಮಾ ಕಂಪನಿಗಳಲ್ಲಿನ ವಿಮೆ ಮೊತ್ತ 25,28,446 ರೂ. ಸೇರಿ ಒಟ್ಟು ಚರಾಸ್ತಿ ಮೌಲ್ಯ 4.10 ಕೋಟಿ ರೂ.ಗಳಾಗಿದೆ ಎಂದು ಅವರು ಸಲ್ಲಿಸಿರುವ ಆಸ್ತಿ ವಿವರ ಸಲ್ಲಿಕೆ ವೇಳೆ ವಿವರಣೆ ನೀಡಿದ್ದಾರೆ.

ವಿವಿಧೆಡೆ ಕೇಸ್‌ಗಳು: ಬೆಂಗಳೂರು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು, ನವದೆಹಲಿಯ ಸಿವಿಲ್ ಲೈನ್ಸ್​​ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಅವಮಾನ, ನಂಬಿಕೆಗೆ ಚ್ಯುತಿ, ಕಾನೂನುಬಾಹಿರವಾಗಿ ಗುಂಪು ಜಮಾವಣೆ, ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಗಲಾಟೆಗೆ ಸಂಬಂಧಿಸಿದ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಇವಾಗಿವೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ ಆದೇಶ ಪ್ರಶ್ನಿಸಿ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಮೇಲ್ಮನವಿ, ನವದೆಹಲಿ ಹೈಕೋರ್ಟ್‌ನಲ್ಲೂ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES