Monday, May 20, 2024

ತೀರ್ಥ, ಪ್ರಸಾದ ನೀಡುವ ಹಕ್ಕಿಗಾಗಿ ದೇವಸ್ಥಾದಲ್ಲೇ 2 ಕುಟುಂಬಗಳ ನಡುವೆ ಕಿತ್ತಾಟ

ಕಾರವಾರ : ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಕ್ಷೇತ್ರ. ಈ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದ್ರೆ ಇಂದು ತೀರ್ಥ, ಪ್ರಸಾದ ಹಂಚಿಕೆ ವಿಚಾರಕ್ಕೆ ಎರಡು ಕುಟುಂಬಸ್ಥರು ದೇವಸ್ಥಾನಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯ ಪುರಾಣ ಪ್ರಸಿದ್ಧಿ ಪಡೆದಿದೆ. ಆದ್ರೆ, ಇಂದು ಇದೇ ದೇವಸ್ಥಾನದಲ್ಲಿ ಎರಡು ಅರ್ಚಕ ಕುಟುಂಬಗಳು ಕಿತ್ತಾಡಿಕೊಂಡಿದ್ದು, ವಾದ ವಿವಾದಗಳು ತಾರಕಕ್ಕೇರಿದ್ದವು.

ಗೋಕರ್ಣ ದೇವಾಲಯದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಪಾಳಿಗಾಗಿ ಇಲ್ಲಿನ ಜಂಬೇ ಮನೆತನ ಹಾಗೂ ಗೋಪು ಮನೆತನಗಳ ಅರ್ಚಕರ ನಡುವೆ ಇಂದು ಮಾತಿನ ಚಕಮಕಿ ಏರ್ಪಟ್ಟಿತ್ತು. ಬೆಳಗ್ಗೆ ದೇವಸ್ಥಾನಕ್ಕೆ ಗೋಪು ಮನೆತನದ ಅರ್ಚಕರು ತೀರ್ಥ ವಿತರಣೆಯ ಪಾಳಿ ತಮ್ಮದೆಂದು ಅವಕಾಶ ಕೇಳಲು ತೆರಳಿದ್ರು. ಈ ವೇಳೆ ಜಂಬೇ ಮನೆತನದ ಅರ್ಚಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ತೀರ್ಥ ವಿತರಣೆಯ ಹಕ್ಕು ತಮ್ಮದೆಂದು ವಾದಿಸಿದ್ದಾರೆ. ಇದರಿಂದ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆಯಿತು.

ದೇವಸ್ಥಾದಲ್ಲೇ ನಾ ನಾ ನೀನಾ ಗಲಾಟೆ

ಇನ್ನು ಈ ಹಿಂದೆ ಕೂಡ ಗಲಾಟೆ ನಡೆದಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ನಡುವೆ ಎರಡು ಮನೆತನಗಳು ದೇವಸ್ಥಾದಲ್ಲೇ ನಾ ನಾ ನೀನಾ ಎಂದು ಗಲಾಟೆ ನಡೆಸಿವೆ. ಇನ್ನು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಈ ವಿಚಾರದ ಚರ್ಚೆಗೆ ಏಳು ದಿನಗಳ ಅವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರೆಸುವಂತೆ ಸೂಚನೆ ನೀಡಿ ವಿವಾದಕ್ಕೆ ಅಲ್ಪವಿರಾಮ ನೀಡಿದ್ದಾರೆ.

ಮಹಾಬಲೇಶ್ವರ ದೇವಾಲಯಕ್ಕೆ ಕಪ್ಪು ಚುಕ್ಕೆ

ಒಟ್ನಲ್ಲಿ, ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ವಿತರಣೆ ವಿಚಾರ ಪ್ರತಿಭಟನೆಯ ಹಂತ ತಲುಪಿದ್ದು, ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

RELATED ARTICLES

Related Articles

TRENDING ARTICLES