Saturday, April 27, 2024

‘ಯುವ’ ಚಕ್ರವ್ಯೂಹದ ಅಭಿಮನ್ಯು ಅಲ್ಲ, ಬಬ್ರುವಾಹನ: ಪವರ್ ಟಿವಿ ರೇಟಿಂಗ್ 4.5/5

ಫಿಲ್ಮಿಡೆಸ್ಕ್​:  ಪ್ರಿಯ ವೀಕ್ಷಕರೇ.. ಸುಳ್ಳಾಗಲಿಲ್ಲ ನಿರೀಕ್ಷೆ. ಯುವರಾಜ ದೊಡ್ಮನೆ ಹುಡ್ಗ ಹೌದು. ಆದ್ರೆ ಯುವ ನಮ್ಮ ಚಿತ್ರರಂಗದ ಭರವಸೆ ಅಂದ್ರೆ ತಪ್ಪಾಗಲ್ಲ. ಬಹುನಿರೀಕ್ಷಿತ ಯುವ ಸಿನಿಮಾ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಅಪ್ಪು ಜಾಗವನ್ನು ತುಂಬೋಕೆ ಬರ್ತಿರೋ ಪುನೀತ್ ಮಗ ಅಂತಲೇ ಹೇಳ್ತಿದ್ದ ಯುವರಾಜ್​​ಕುಮಾರ್ ಪಟ್ಟಾಭಿಷೇಕ ಅದ್ಭುತ, ಅಮೋಘ, ಅದ್ವಿತೀಯವಾಗಿ ಆಗಿದೆ. ಹಾಗಾದ್ರೆ ಸಿನಿಮಾದ ಕಥೆ ಏನು..? ಅಭಿಮಾನಿ ದೇವರುಗಳ ಸೆಲೆಬ್ರೇಷನ್ ಹೇಗಿತ್ತು..? ದೊಡ್ಮನೆ ಕಲಾವಿದರು ಹೇಳಿದ್ದೇನು ಅನ್ನೋ ಎಲ್ಲಾ ವಿಷಯಗಳ ಜೊತೆ ‘ಯುವ’ ಹಾನೆಸ್ಟ್ ರಿವ್ಯೂ ಓದಿ.

ತಾರಾಗಣ :

ಚಿತ್ರ:ಯುವ, ನಿರ್ದೇಶನ: ಸಂತೋಷ್ ಆನಂದ್​ರಾಮ್, ನಿರ್ಮಾಣ: ಹೊಂಬಾಳೆ ಫಿಲಂಸ್, ಸಂಗೀತ: ಅಜನೀಶ್ ಲೋಕನಾಥ್, ಕ್ಯಾಮೆರಾ: ಶ್ರೀಷ ಕುಡುವಳ್ಳಿ, ತಾರಾಗಣ: ಯುವ ರಾಜ್​​ಕುಮಾರ್, ಅಚ್ಯುತ್ ಕುಮಾರ್, ಸುಧಾರಾಣಿ, ಸಪ್ತಮಿ ಗೌಡ, ಕಿಶೋರ್, ಗೋಪಾಲ್ ದೇಶಪಾಂಡೆ ಮುಂತಾದವರು.

ಯುವ ಸ್ಟೋರಿಲೈನ್ :

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜ್​​ನಲ್ಲಿ ನಡೆಯೋ ಲೋಕಲ್ ಹುಡುಗರು ಹಾಗೂ ಹಾಸ್ಟೆಲ್ ಹುಡುಗರ ನಡುವಿನ ಗ್ಯಾಂಗ್​​ವಾರ್​​ನಿಂದ ಯುವ ಸಿನಿಮಾ ತೆರೆದುಕೊಳ್ಳುತ್ತದೆ. ಆ ಗ್ಯಾಂಗ್​ವಾರ್​ಗೆ ಆದಿ, ಅಂತ್ಯ ಎಲ್ಲವೂ ಯುವ ಅನ್ನೋ ಬಿಸಿರಕ್ತದ ಹುಡ್ಗ. ಆತ ಬರೀ ಕಾಲೇಜ್ ಸ್ಟೂಡೆಂಟ್ ಮಾತ್ರವಲ್ಲ, ನ್ಯಾಷನಲ್ ಲೆವೆಲ್​​ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸೋ ಕುಸ್ತಿಪಟು. ಬುಕ್ಕಿ  ಅನ್ನೋ ಕಾರಣಕ್ಕೆ ಎರಡು ವರ್ಷ ಬ್ಯಾನ್ ಕೂಡ ಆಗಿರ್ತಾನೆ. ಎರಡು ಕಾಲೇಜ್ ಟೀಂಗಳ ನಡುವೆ ಹೊಡೆದಾಟ, ಬಡಿದಾಟದ ನಡುವೆ ಯುವ-ಸಿರಿಯ ನವಿರಾದ ಪ್ರೇಮಕಥೆ. ಆ ಮಧ್ಯೆ ಕಾಲೇಜ್​​ನಿಂದ ಜಗಳಗಳಿಗೆ ಕಾರಣೀಭೂತರಾದ ಸ್ಟೂಡೆಂಟ್ಸ್​​ನ ಡಿಬಾರ್ ಮಾಡೋ ಪ್ರಿನ್ಸಿಪಾಲ್. ಮಗನ ಜಗಳ, ಜಂಜಾಟಗಳಿಂದ ಬೇಸತ್ತ ತಂದೆ ಯುವನೊಟ್ಟಿಗೆ ಮಾತನಾಡೋದನ್ನೇ ಬಿಡ್ತಾರೆ. ಮಗಳ ಮದ್ವೆಗೆ ಬರಬಾರದು ಅಂತ ವಾರ್ನ್​ ಮಾಡ್ತಾರೆ. ಆದ್ರೆ ಯುವ ಸಹೋದರಿಯ ಮದ್ವೆ ಮುಗೀತಾ ಇದ್ದಂತೆ ತಂದೆ ನಾಪತ್ತೆ ಆಗಿರ್ತಾರೆ. ಯಾಕೆ ನಾಪತ್ತೆ ಆಗಿರ್ತಾರೆ..? ಅದ್ರ ಹಿಂದಿನ ಅಸಲಿಯತ್ತೇನು..? ತಂದೆ-ಮಗ ಒಂದಾಗ್ತಾರಾ ಇಲ್ವಾ..? ಗ್ಯಾಂಗ್​ವಾರ್​ಗೆ ಫುಲ್​ಸ್ಟಾಪ್ ಬೀಳುತ್ತಾ ಇಲ್ವಾ..? ಬುಕ್ಕಿ ಅಲ್ಲ ಅನ್ನೋ ಕಳಂಕದಿಂದ ಮುಕ್ತನಾಗ್ತಾನಾ ಅನ್ನೋದನ್ನ ನೀವು ಥಿಯೇಟರ್​ನಲ್ಲೇ ನೋಡಬೇಕು.

ಇದನ್ನೂ ಓದಿ: ಈಶ್ವರಪ್ಪ ಮೋದಿ ಫೋಟೋ ಬಳಕೆ; ಈಶ್ವರಪ್ಪ ಗೆಲ್ಲುವ ಪ್ರಶ್ನೆಯೇ ಇಲ್ಲ- ಶಾಸಕ ಚನ್ನಬಸಪ್ಪ

‘ಯುವ’ ಟೈಟಲ್ ರೋಲ್​​ಗೆ ಸಾಮರ್ಥ್ಯಕ್ಕೂ ಮೀರಿ ನ್ಯಾಯ ಒದಗಿಸಿದ್ದಾರೆ ಡಾ. ರಾಜ್​ಕುಮಾರ್​​ರ ಮೊಮ್ಮಗ ಯುವರಾಜ್ ಕುಮಾರ್. ನಟನೆ ಅನ್ನೋದು ರಕ್ತಗತವಾಗಿಯೇ ಬಂದಿದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಡ್ಯಾನ್ಸ್ ಹಾಗೂ ಫೈಟ್ ದೃಶ್ಯಗಳಲ್ಲಿ ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್ ಛಾಯೆ ಕಾಣಲಿದೆ. ಅದೇ ಎನರ್ಜಿ, ಅದೇ ಫೋರ್ಸ್​, ಅದೇ ಛಾರ್ಮ್​. ಇನ್ನು ಎಮೋಷನಲ್ ದೃಶ್ಯಗಳಲ್ಲಿ ಚೊಚ್ಚಲ ಚಿತ್ರದ ಕಲಾವಿದ ಅನ್ನೋ ಅನುಮಾನವೇ ಬಾರದ ರೇಂಜ್​ಗೆ ಔಟ್​​ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ಯುವರಾಜ್ ಕುಮಾರ್. ಯುವ ಚಕ್ರವ್ಯೂಹದ ಅಭಿಮನ್ಯು ಅಲ್ಲ, ಬಬ್ರುವಾಹನ ಅನ್ನೋ ಡೈಲಾಗ್ ಅಕ್ಷರಶಃ ನಿಜ ಅನಿಸಲಿದೆ.

‘ಯುವ’ ತಂದೆಯಾಗಿ ಅಚ್ಯುತ್ ಕುಮಾರ್ ಅತ್ಯದ್ಭುತವಾಗಿ ಕಾಣಸಿಗುತ್ತಾರೆ. ಬಹಳ ಸಹಜ ಹಾಗೂ ಸ್ವಾಭಾವಿಕ ನಟನೆಯಿಂದ ನೋಡುಗರ ಕಣ್ಣು ಒದ್ದೆಯಾಗಿಸುತ್ತಾರೆ. ಮೊದಲಾರ್ಧ ಯುವ ಹೀರೋ ಆದ್ರೆ ದ್ವಿತಿಯಾರ್ಧದಲ್ಲಿ ಅಚ್ಯುತ್ ಸೂಪರ್ ಹೀರೋ. ಇನ್ನು ತಾಯಿಯಾಗಿ ಸುಧಾರಾಣಿ, ಯುವ ಅಕ್ಕನ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ಒಳ್ಳೆಯ ಸ್ಕೋರ್ ಮಾಡಿದ್ದಾರೆ.

ಕಾಂತಾರದ ಸಿಂಗಾರ ‘ಸಿರಿ’ ಸಪ್ತಮಿ ಗೌಡ, ಇಲ್ಲಿ ‘ಸಿರಿ’ ಪಾತ್ರದಲ್ಲಿ ಯುವನ ಯುವರಾಣಿಯಾಗಿ ಗ್ಲಾಮರ್ ಹೆಚ್ಚಿಸಿದ್ದಾರೆ. ಕುಸ್ತಿ ಕೋಚ್ ಆಗಿ ಹುಲಿ ಕಿಶೋರ್ ಪರ್ಫಾಮೆನ್ಸ್ ಸೂಪರ್ ಅನಿಸಲಿದೆ. ಪ್ರಿನ್ಸಿಪಾಲ್ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ ಸೇರಿದಂತೆ ವಿಲನ್ ಪಾತ್ರಗಳನ್ನ ನಿರ್ವಹಿಸಿರೋ ಹೊಸ ಕಲಾವಿದರು ಕೂಡ ಹುಬ್ಬೇರಿಸೋ ರೀತಿ ಮನೋಜ್ಞ ಅಭಿನಯ ಮಾಡಿದ್ದಾರೆ.

ಯುವ ಪ್ಲಸ್ ಪಾಯಿಂಟ್ಸ್ :

  • ಯುವರಾಜ್, ಅಚ್ಯುತ್ ನಟನೆ
  • ಸಂತೋಷ್ ಆನಂದ್​ರಾಮ್ ಕಥೆ, ನಿರ್ದೇಶನ & ನಿರೂಪಣೆ
  • ಅಜನೀಶ್ ಸಂಗೀತ & ಹಿನ್ನೆಲೆ ಸಂಗೀತ
  • ಮಕ್ಕಳಿಂದ ಮುದುಕರವರೆಗೆ ಮೆಚ್ಚುವಂತಹ ಡೈಲಾಗ್ಸ್
  • ಮೈನವಿರೇಳಿಸೋ ಫೈಟ್ಸ್
  • ಡೆಲಿವರಿ ಬಾಯ್ಸ್ ಕಷ್ಟ, ಕಾರ್ಪಣ್ಯಗಳು
  • ತಂದೆ- ಮಗನ ಬಾಂಡಿಂಗ್
  • ಯೂತ್​ಫುಲ್ ವಿಚಾರಗಳು

ಯುವ ಮೈನಸ್ ಪಾಯಿಂಟ್ಸ್ :

ಸಾಮಾನ್ಯವಾಗಿ ಸಿನಿಮಾ ಅಂದ್ಮೇಲೆ ಸಣ್ಣಪುಟ್ಟ ತಪ್ಪುಗಳು ಇದ್ದೇ ಇರುತ್ತೆ. ಹಾಸ್ಯದ ಕೊರತೆ ಜೊತೆಗೆ ಗ್ರಾಮರ್ ಬಗ್ಗೆ ಹೆಚ್ಚು ಫೋಕಸ್ ಮಾಡಿರೋ ಡೈರೆಕ್ಟರ್, ಗ್ಲಾಮರ್​​ನ ಕಡೆಗಣಿಸಿದ್ದಾರೆ ಅನಿಸುತ್ತೆ. ಅವುಗಳನ್ನ ಹೊರತುಪಡಿಸಿದೆ ಸಂತೋಷ್ ಆನಂದ್​ರಾಮ್ ಈ ಹಿಂದಿನ ಸಿನಿಮಾಗಳಲ್ಲಿ ಆದಂತಹ ತಪ್ಪುಗಳನ್ನ ತಿದ್ದಿಕೊಂಡು, ಈ ಸಿನಿಮಾನ ಬಹಳ ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡಿದ್ದಾರೆ.

ಯುವಗೆ ಪವರ್ ಟಿವಿ ರೇಟಿಂಗ್: 4.5/5

ಯುವ ಫೈನಲ್ ಸ್ಟೇಟ್​​ಮೆಂಟ್ :

‘ಯುವ’.. ಇದು ಬರೀ ಹೆಸರಲ್ಲ. ಯುವ ಸಮುದಾಯವನ್ನು ಪ್ರತಿನಿಧಿಸೋ ಸಿನಿಮಾ. ತಂದೆಯ ತ್ಯಾಗದ ಬಗ್ಗೆ ಅರಿವಿಲ್ಲದ ಮಕ್ಕಳಿಗೆ ಅದನ್ನ ಗೊತ್ತು ಪಡಿಸೋ ಸಿನಿಮಾ. ಕೌಟುಂಬಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ಕಮರ್ಷಿಯಲ್ ಸಬ್ಜೆಕ್ಟ್​​ನ ಬಹಳ ಅದ್ಭುತವಾಗಿ ತೆರೆಗೆ ತರಲಾಗಿದೆ. ದೊಡ್ಮನೆ ಅಂದ್ರೆ ಅದು ಮನರಂಜನೆ ನೀಡೋ ಮನೆ ಮಾತ್ರ ಅಲ್ಲ. ಮನೋವಿಕಾಸದ ಬೀಜ ಬಿತ್ತುವ ಹೆಮ್ಮರವೂ ಹೌದು. ಆ ನಿಟ್ಟಿನಲ್ಲಿ ಆ ಮನೆಯ ಘನತೆ, ಗೌರವಕ್ಕೆ ತಕ್ಕನಾದ ಸಿನಿಮಾ ಇದಾಗಲಿದೆ. ಅದ್ರಲ್ಲೂ ಮಿಡಲ್ ಕ್ಲಾಸ್ ಫ್ಯಾಮಿಲಿಗಳಲ್ಲಿನ ಸಂಬಂಧಗಳು, ಅವ್ರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ ಈ ಸಿನಿಮಾ. ಡೆಲಿವರಿ ಬಾಯ್ಸ್​​​ನ ಹಗುರವಾಗಿ ನೋಡೋರು ಈ ಚಿತ್ರ ನೋಡಿದ ಬಳಿಕ ಬಹುಶಃ ಮೈಂಡ್​​ಸೆಟ್ ಬದಲಿಸಿಕೊಳ್ತೀರಾ. ತಂದೆಯೊಟ್ಟಿಗೆ ಮಾತು ಬಿಟ್ಟಿರೋ ಮಕ್ಕಳು ಕ್ಷಮೆಯಾಚಿಸಿ ಅಪ್ಪುಗೆ ನೀಡ್ತೀರಾ. ಇಂತಹ ಸಿನಿಮಾನ ಬಹಳ ಲ್ಯಾವಿಶ್ ಆಗಿ ನಿರ್ಮಾಣ ಮಾಡೋದ್ರ ಜೊತೆ ಅಣ್ಣಾವ್ರ ಮೊಮ್ಮಗನನ್ನ ಲಾಂಚ್ ಮಾಡಿದ ಹೊಂಬಾಳೆ ಫಿಲಂಸ್​​ಗೆ ಒಂದು ಸೆಲ್ಯೂಟ್ ಹೇಳಲೇಬೇಕು. ಸೋ.. ಮಕ್ಕಳಿಂದ ಹಿರಿಯರವರೆಗೆ ಯಾವುದೇ ಮುಜುಗರವಿಲ್ಲದೆ, ಸಕುಟುಂಬ ಸಮೇತ ನೋಡಬಹುದಾದ ಚಿತ್ರ ಯುವ. ಮಿಸ್ ಮಾಡ್ಕೋಬೇಡಿ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES