Thursday, May 9, 2024

ಮೇಕೆದಾಟು; ಡಿಎಂಕೆ ನಡೆ ಖಂಡಿಸಿದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಖಂಡಿಸಿದ್ದಾರೆ.

ಈ ಕುರಿತು ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ಅಚಲ ನಿರ್ಧಾರವನ್ನು ಇದೇ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ದೃಢ ಹೆಜ್ಜೆಯನ್ನು ಇಡಲಿ ಎಂದು ಮಾಜಿ ಪ್ರಧಾನಿಗಳು ಆಗ್ರಹಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ಅಂಶವನ್ನು ಸೇರಿಸುವುದನ್ನು ಜೆಡಿಎಸ್ ಖಂಡಿಸುತ್ತದೆ. ನಾವು ಕೂಡ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಬೆಂಬಲಿಸಿ ಆ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಜನರಿಗೆ ತಿಳಿಸುತ್ತೇವೆ ಎಂದು ಗುಡುಗಿದರು.

ಇದನ್ನೂ ಓದಿ: ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ಇಂತಹ ಬೆದರಿಕೆಗಳಿಗೆ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಚುನಾವಣೆ ಮುಗಿದ ಮೇಲೆ ಮೇಕೆದಾಟು ಅಣೆಕಟ್ಟು ಕಟ್ಟಲು ನಾನೊಬ್ಬನೇ ಅಲ್ಲ, ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಬಿಜೆಪಿ ನಾಯಕರಾದ ಯಡಿಯೂರಪ್ಪ ಸಮೇತ ಹೋರಾಟ ಮಾಡೋಣ. ಅದಕ್ಕೂ ಮೊದಲು ಮೇಕೆದಾಟು ಕಟ್ಟಲು ಮ್ಯಾನಿಫೆಸ್ಟೋದಲ್ಲಿ ಹಾಕೋಣ ಹಾಗೂ ಆ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರಿಗೆ ಭರವಸೆ ನೀಡೋಣ. ಡಿಎಂಕೆ ಮಿತ್ರಪಕ್ಷವಾದ ಕಾಂಗ್ರೆಸ್ ಕೂಡ ಮೇಕೆದಾಟು ಯೋಜನೆ ಬೆಂಬಲಿಸಿ ಪ್ರಣಾಳಿಕೆಯಲ್ಲಿ ಜನತೆಗೆ ಭರವಸೆ ನೀಡಲಿ ಎಂದು ಮಾಜಿ ಪ್ರಧಾನಿಗಳು ಆಗ್ರಹಪಡಿಸಿದರು.

ತಮಿಳುನಾಡು ಪರ ವಕೀಲ ಶೇಖರ್ ನಫಾರ್ಡ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಮೇಕೆದಾಟು ಅಣೆಕಟ್ಟು ಕಟ್ಟಲಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಅದರಿಂದ ನಾನು ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಡಿಎಂಕೆ ಅವರು ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ನಿಲುವು ಪ್ರಕಟಿಸದಂತೆ, ಇವರು ಕೂಡ ಪ್ರಣಾಳಿಕೆಯಲ್ಲಿ ಮೇಕೆದಾಟು ಪರವಾಗಿ ನಿಲುವು ಪ್ರಕಟಿಸಲಿ ಎಂದರು ಅವರು.

ನಾನು ದೆಹಲಿಗೆ ಯಾಕಾಗಿ ಹೋದೆ? ಮೇಕೆದಾಟು ಮಾಡಲು ಬಿಡೋದೇ ಇಲ್ಲ ಅಂತಾರೆ. ನಾವು ನಮ್ಮ ಮ್ಯಾನಿಫೆಸ್ಟೋದಲ್ಲಿ ಹಾಕ್ತೀವಿ. ಮೇಕೆದಾಟು ನಮ್ಮ ರಾಜ್ಯದಲ್ಲಿದೆ. ಇದರಲ್ಲಿ ಎರಡನೇ ಮಾತಿಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಶೇಖಾವತ್ ಅವರಿಗೆ ವಿವರವಾಗಿ ಮೇಕೆದಾಟು ಯೋಜನೆ ಬಗ್ಗೆ ಪತ್ರ ಬರೆದಿದ್ದೇನೆ. ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಗೆ ಅವಕಾಶ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ತಮಿಳುನಾಡಿಗೆ ನೀರು ಬಿಡುವುದನ್ನು ನಿಯಂತ್ರಿಸಬೇಕು ಎಂದು ಪತ್ರ ಬರೆದಿದ್ದೇನೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ತಮಿಳುನಾಡು ಸಿಎಂ ಬಹಳ ಕಠೋರವಾದ ನಿಲುವು ತೆಗೆದುಕೊಂಡಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡಲ್ಲ ಅಂತಾ ಕಠಿಣವಾದ ಅಂಶ ಸೇರಿಸಿದ್ದಾರೆ. ನಾನೂ ಬೇರೆ ಶಬ್ದ ಬಳಕೆ ಮಾಡಬಹುದು. ಆದರೆ ‘ಕಠಿಣವಾದ’ ಎನ್ನುವ ಪದವನ್ನಷ್ಟೇ ತೆಗೆದುಕೊಂಡಿದ್ದೇನೆ ಎಂದು ಖಾರವಾಗಿ ತಿರುಗೇಟು ಕೊಟ್ಟ ಅವರು; 1964ರಲ್ಲಿ ವಿಧಾನಸಭೆಯಲ್ಲಿ‌ ಒಂದು ಖಾಸಗಿ ನಿರ್ಣಯ ಮಂಡನೆ ಮಾಡಿದ್ದೆ ನಾನು. ನಮ್ಮ ರಾಜ್ಯದ ಸಂಪನ್ಮೂಲಗಳಿಂದ ಹೇಮಾವತಿ, ಹಾರಂಗಿ, ಕಬಿನಿ ಯೋಜನೆಗಳನ್ನು ಕಾರ್ಯಗತ ಮಾಡಬೇಕು ಎಂದು ನಾನು ವಾದ ಮಂಡನೆ ಮಾಡಿದ್ದೆ. ಅದು ಸಾಧ್ಯ ಆಯಿತು. ಇದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES