Thursday, May 9, 2024

ಪ್ರಮೋದ್ ಮಧ್ವರಾಜ್​ಗೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹ

ಉಡುಪಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೀನುಗಾರ ಸಮಾಜದ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ವಿವಿಧ ಮೀನುಗಾರ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ.ಸುವರ್ಣ, ಈಗಿನ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯಮಟ್ಟದ ನಾಯಕಿಯಾಗಿರುವುದರಿಂದ ಅವರಿಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ, ಮೀನುಗಾರರಾಗಿ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಕ್ಷೇತ್ರವೇ ಹೆಚ್ಚು ಸೂಕ್ತವಾಗಿರುವುದರಿಂದ ಅವರಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಇಡೀ ರಾಜ್ಯದಲ್ಲೇ ನಂ.1 ಶಾಸಕ

ರಾಜಕೀಯ ಹಿನ್ನೆಲೆಯಿಂದ ಬಂದಿರುವ ಪ್ರಮೋದ್ ಮಧ್ವರಾಜ್, ಶಾಸಕರಾಗಿ, ಸಚಿವರಾಗಿಯೂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಭ್ರಷ್ಟಾಚಾರ, ಕಳಂಕ ರಹಿತ ಪರಿಶುದ್ಧ ರಾಜಕಾರಣಿಯಾಗಿ 2018ರ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ನಂ.1 ಶಾಸಕರಾಗಿ ಮೂಡಿಬಂದಿದ್ದರು ಎಂದು ತಿಳಿಸಿದ್ದಾರೆ.

ಮೀನುಗಾರರ ಸಮಸ್ಯೆಗಳು ಪರಿಹಾರ ಕಂಡಿಲ್ಲ

ಮಲ್ಪೆ ಬಂದರು ಸಂಪರ್ಕಿಸುವ ಆದಿ ಉಡುಪಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗದೆ ನನೆಗುದಿಗೆ ಬಿದ್ದಿದೆ. ಅನೇಕ ವರ್ಷಗಳ ವಿಮಾನ ನಿಲ್ದಾಣದ ಸ್ಥಾಪನೆ ಕೂಡ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮೀನುಗಾರರ ಅನೇಕ ಸಮಸ್ಯೆಗಳು ಇನ್ನೂ ಪರಿಹಾರ ಕಂಡಿಲ್ಲ. ಈ ಎಲ್ಲ ಯೋಜನೆ ಅನುಷ್ಠಾನ ಮಾಡಲು ಸಮರ್ಥ ನಾಯಕತ್ವ ಹೊಂದಿರುವ ಪ್ರಮೋದ್ ಮಧ್ವರಾಜ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೀನುಗಾರ ಮುಖಂಡರಾದ ಸಾಧು ಸಾಲಿಯನ್, ಜಗನ್ನಾಥ ಕುಂದರ್, ಜಗನ್ನಾಥ ಅಮೀನ್, ಮೋಹನ್ ಕುಂದರ್, ನಾಗರಾಜ್ ಸುವರ್ಣ, ಕೃಷ್ಣ ಸುವರ್ಣ, ಸುಭಾಸ್ ಮೆಂಡನ್, ರವಿರಾಜ್ ಸುವರ್ಣ, ಯೋಗೀಶ್ ಸಾಲ್ಯಾನ್‌ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES