Thursday, May 9, 2024

‘ನಡೆದಾಡಿದ ದೇವರು’ ಡಾ.ಶಿವಕುಮಾರ ಶ್ರೀಗಳ 5 ವರ್ಷದ ಪುಣ್ಯಸ್ಮರಣೆ : ಸಿಎಂ, ಮಾಜಿ ಸಿಎಂ ಭಾಗಿ

ತುಮಕೂರು: ಶ್ರೀ ಸಿದ್ಧಗಂಗಾ ಮಠದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 5 ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ.

ಶ್ರೀಗಳ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಶ್ರೀಗಳ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಬೆಳಗ್ಗೆ 5.30ರಿಂದ ಮಹಾರುದ್ರಾಭಿಷೇಕ, ರಾಜೋಪಚಾರ. ಬಿಲ್ವಾರ್ಚನೆ ಸೇರಿದಂತೆ ಪೂಜಾ ಕೈಂಕರ್ಯಗಳು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಹರಗರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ.

ಪುಣ್ಯ ಸ್ಮರಣೆಗೆ ಬರುವ ಭಕ್ತರಿಗೆ ಶ್ರೀಗಳ ಗದ್ದುಗೆ ದರುಶನಕ್ಕೆ ಸೂಕ್ತ ವ್ಯವಸ್ಥೆಯನ್ನು ಮಠದ ಆಡಳಿತ ಮಂಡಳಿ ಮಾಡಿದೆ. ಎಲ್ಲಿಯೂ ನೂಕುನುಗ್ಗಲು ಉಂಟಾಗದಂತೆ ಗದ್ದುಗೆಗೆ ತೆರಳಲು ಮಠದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ

ಸಿಎಂ, ಮಾಜಿ ಸಿಎಂ ಭಾಗಿ

ಶ್ರೀಗಳ ಪುಣ್ಯ ಸಂಸ್ಮರಣೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬೆಳಗ್ಗೆ 11ಕ್ಕೆ ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಧ್ಯಕ್ಷ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸ್ಮರಣೋತ್ಸವವನ್ನು ಸಿದ್ದರಾಮಯ್ಯ ಉದ್ಘಾಟಿಸುವರು. ಯಡಿಯೂರಪ್ಪ ಅಧ್ಯಕ್ಷತೆವಹಿಸಲಿದ್ದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೇತೃತ್ವವಹಿಸುವರು. ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು. ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀಮಠದ ಶಾಲಾ-ಕಾಲೇಜು ಮಕ್ಕಳಿಂದ ಸಂಜೆ 4.30ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶಿವಕುಮಾರ ಸ್ವಾಮೀಜಿ ಆಸ್ಪತ್ರೆ ಉದ್ಘಾಟನೆ

ಗೃಹಸಚಿವ ಡಾ.ಜಿ.ಪರಮೇಶ್ವರ್‌, ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಆಸ್ಪತ್ರೆ, ಎಸ್‌ಎಂಸಿಆರ್‌ಐ ಉದ್ಘಾಟಿಸುವರು. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ಮೃತಿವನ, ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಶ್ರೀ ಸಿದ್ಧಗಂಗಾ ಫಾರ್ಮಸಿ ಕಾಲೇಜು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸ್ನಾತಕೋತ್ತರ ವಿಭಾಗ, ಎಸ್‌ಎಂಸಿಆರ್‌ಐ ಕಟ್ಟಡ ಹಾಗೂ ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸುವರು.

ಪುತ್ಥಳಿ ಮೆರವಣಿಗೆ: ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಬೆಳ್ಳಿ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿಶ್ರೀಗಳ ಗದ್ದುಗೆಯಿಂದ ಗೋಸಲ ಸಿದ್ದೇಶ್ವರ ವೇದಿಕೆವರೆಗೆ ಮೆರವಣಿಗೆ ನಡೆಯಲಿದೆ. 108 ಕಳಶ, ಪೂರ್ಣಕುಂಭ, ನಂದಿಧ್ವಜದೊಂದಿಗೆ ಮೆರವಣಿಗೆ ಇರಲಿದೆ.

ದಾಸೋಹ ವ್ಯವಸ್ಥೆ

ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ದಾಸೋಹಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 6 ಕಡೆಗಳಲ್ಲಿ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಉಪಹಾರ ವ್ಯವಸ್ಥೆ ಇರಲಿದೆ.

RELATED ARTICLES

Related Articles

TRENDING ARTICLES