Friday, April 26, 2024

5 ಉಚಿತ ಗ್ಯಾರಂಟಿ ಪಡೆಯಲು ಸರ್ಕಾರದ ಷರತ್ತುಗಳೇನು? : ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಐದು ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆ ಜಾರಿ ಹಾಗೂ ಷರತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹಾಗಿದ್ರೆ, ಯಾವ ಯೋಜನೆ ಯಾವಾಗ ಜಾರಿ? ಯಾವ ಷರತ್ತು ಅನ್ವಯ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಗೃಹಜ್ಯೋತಿ ಯೋಜನೆ : ಜುಲೈ 1 ರಿಂದ ಜಾರಿ

ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದು. ಆದರೆ, ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಕಟ್ಟಬೇಕು. ಈ ಯೋಜನೆಯ ದುರ್ಬಳಕೆ ತಡೆಯಲು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿ ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತ್ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಗೃಹಲಕ್ಷ್ಮಿ ಯೋಜನೆ : ಆಗಸ್ಟ್ 15ರಂದು ಪ್ರಾರಂಭ

ಯಾವುದೇ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ಸಹಾಯಧನವನ್ನು ನೀಡಲಾಗುವುದು. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು. ಬಿಪಿಎಲ್, ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅರ್ಜಿಗಳ ಪರಿಶೀಲನೆ, ತಂತ್ರಾಂಶ ಅಭಿವೃದ್ಧಿಪಡಿಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

ಅನ್ನಭಾಗ್ಯ ಯೋಜನೆ : 10 ಕಿಲೋ ಅಕ್ಕಿ ಉಚಿತ

ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಹಾಗೂ ಅಂತ್ಯೋದಯ ಕಾರ್ಡ್‌ ಫಲಾನುಭವಿಗಳಿಗೆ (ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ) ತಿಂಗಳಿಗೆ  ತಲಾ 10 ಕಿಲೋ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಸದ್ಯ 5 ಕಿಲೋ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಅದನ್ನು 10 ಕಿಲೋಗೆ ಹೆಚ್ಚಿಸಲಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ಶಕ್ತಿ ಯೋಜನೆ : ಜೂನ್ 11ರಂದು ಜಾರಿ

ರಾಜ್ಯದ ಎಲ್ಲಾ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣ (ರಾಜ್ಯದೊಳಗೆ ಮಾತ್ರ)ಕ್ಕೆ ಅವಕಾಶ ಕಲ್ಪಿಸಲಾಗುವುದು. ಜೂನ್ 11 ರಂದು ‘ಶಕ್ತಿ ಯೋಜನೆ’ಗೆ ಚಾಲನೆ ನೀಡಲಾಗುತ್ತದೆ. ಶೇ. 94 ರಷ್ಟು ಮಹಿಳೆಯರು ಯೋಜನೆಯ ಲಾಭ ಪಡೆಯಲಿದ್ದಾರೆ. ಬಸ್ ಗಳಲ್ಲಿ ಪುರುಷರಿಗೆ ಶೇ.50 ರಷ್ಟು ಆಸನ (ಸೀಟು) ಮೀಸಲಿಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಯುವನಿಧಿ ಯೋಜನೆ : ಯಾರಿಗೆ ಎಷ್ಟು ನಿರುದ್ಯೋಗ ಭತ್ಯೆ?

2022-23ನೇ ಸಾಲಿನ ಎಲ್ಲ ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ರೂ. ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದವರಿಗೆ ಮಾಸಿಕ ನಿರುದ್ಯೋಗ ಭತ್ಯೆ. ಇದು ರಿಜಿಸ್ಟರ್ ಮಾಡಿಕೊಂಡು 24 ತಿಂಗಳವರೆಗೆ ಇದು ಅನ್ವಯ. ಒಂದು ವೇಳೆ ಸರ್ಕಾರಿ ಕೆಲಸ ಪಡೆದುಕೊಂಡರೆ ಈ ಯೋಜನೆ ನೀಡಲಾಗುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಯೊಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಘೋಷಿಸಿದರು.

RELATED ARTICLES

Related Articles

TRENDING ARTICLES