Sunday, May 5, 2024

ಕೊಟ್ಟ ಮಾತಿನಂತೆ ನೇಹಾ ಸಾವಿಗೆ ನ್ಯಾಯ ಕೊಡಿಸುತ್ತೇನೆ : ಸಿದ್ದರಾಮಯ್ಯ

ಹುಬ್ಬಳ್ಳಿ : ಕೊಟ್ಟ ಮಾತಿನಂತೆ ಮೃತ ಯುವತಿ ನೇಹಾ ಹಿರೇಮಠ ಸಾವಿಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ನೇಹಾ ಪೋಷಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇತ್ತೀಚಿಗೆ ಅನ್ಯಕೋಮಿನ ದುಷ್ಕರ್ಮಿಯಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮೃತ ಯುವತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಆರೋಪಿಯ ಕೃತ್ಯಕ್ಕೆ ಸರಿ ಸಮನಾದ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಮುಂದೆ ಯಾರೊಬ್ಬರೂ ಇಂಥ ಹೀನ ಕೃತ್ಯಕ್ಕೆ ಕೈ ಹಾಕಬಾರದು. ಅದರಂತೆ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆಯನ್ನು ಕುಟುಂಬ ಸದಸ್ಯರಿಗೆ ನೀಡಿದ್ದೇನೆ. ನಾವು ಕೊಟ್ಟ ಮಾತಿನಂತೆ ಯುವತಿಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಾವಿಗೆ ಸಾವೇ ಶಿಕ್ಷೆಯಾಗಬೇಕು

ಈ ವೇಳೆ ಮಾತನಾಡಿದ ನೇಹಾ ತಂದೆ ನಿರಂಜನ ಹಿರೇಮಠ, ಸಿಎಂ ಸಿದ್ದರಾಮಯ್ಯ ಮುಂದೆ ಮಗಳ ಸಾವಿಗೆ ನ್ಯಾಯ ಕೇಳಿದ್ದಾರೆ. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಲಯದಲ್ಲಿ 90 ರಿಂದ 120 ದಿನಗಳಲ್ಲಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಫಯಾಜ್ ನನ್ನು ಗಲ್ಲಿಗೇರಿಸಿದ ಮೇಲೆಯೇ ನಮಗೆ ಸಮಾಧಾನ. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಬೆನ್ನಿಗೆ ಇರಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES