Friday, May 10, 2024

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಕೂಗು ಜೋರು

ಮೈಸೂರು: ಇನ್ನೇನು ಕೆಲವೇ ತಿಂಗಳು ರಾಜ್ಯ ವಿಧಾನಸಭಾ ಚುನಾವಣೆ ಭಾಕಿ ಇರುವಾಗಲೇ, ದಿನೇ ದಿನೇ ಸಿಎಂ ಕೂಗು ಕಾಂಗ್ರೆಸ್ ಪಾಳೆಯದಲ್ಲಿ ಹೆಚ್ಚುತ್ತಿದೆ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕೆಂಬ ಕೂಗು ಹೆಚ್ಚುತ್ತಲೇ‌ ಇದೆ. ಕಳೆದ ಎರಡು ಮೂರು ದಿನದಿಂದ ಈ‌ ಕೂಗು ಹೆಚ್ಚಾಗಿದೆ. ಇವತ್ತು ಸಿದ್ದು ತವರು ಜಿಲ್ಲೆಯಲ್ಲೂ ಅದೇ ಕೂಗು ಪ್ರತಿಧ್ವನಿಸಿದೆ.

ಇಂದು ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಜಪ ಜೋರಾಗಿತ್ತು. ಇದಕ್ಕೆ ವೇದಿಕೆಯಾಗಿದ್ದು ಮೈಸೂರಿನ ಕಲಾಮಂದಿರ. ಕಲಾಮಂದಿರದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘ, ಜಿಲ್ಲಾ ಕುರುಬ ಸಂಘದ ವತಿಯಿಂದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಗಿನೆಲೆ ಶ್ರೀಗಳಾದ ಶ್ರೀ ನಿರಂಜನಾಪುರಿ ಸ್ವಾಮಿಜಿ, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸೇರಿ ಹಲವರು ಭಾಗವಹಿಸಿದರು.

ಹೌದು.. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ ಸಹಾ ಆಚರಿಸಲಾಯ್ತು. ಅದಕ್ಕಾಗಿ 75 ಕೆಜಿ ತೂಕದ ಕೇಕ್ ಮಾಡಿಸಲಾಗಿತ್ತು. ಕೇಕ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಬರೆಸಲಾಗಿತ್ತು. ಇನ್ನೂ ಕೇಕ್‌ನ್ನು ಸಿದ್ದರಾಮಯ್ಯ ಖುಷಿ ಖುಷಿಯಿಂದಲೇ ನೋಡಿ ಮೆಚ್ಚುಗೆ ವ್ಯಕ್ತಪಡಿದ್ರು.

ಆದರೆ ಕೇಕ್ ಕಟ್ ಮಾಡಲು ಚಾಕು ಸಿಗದ ಕಾರಣ ಶ್ರೀಗಳೇ ಕೇಕ್ ತೆಗೆದು ಸಿದ್ದರಾಮಯ್ಯಗೆ ತಿನಿಸಿದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುರುಬ ಸಮುದಾಯದ ಸಂಘಟನೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಸಂಗೊಳ್ಳಿ ರಾಯಣ್ಣ ಬಳಸುತ್ತಿದ್ದ ಮಾದರಿಯ ಬೆಳ್ಳಿಯ ಖಡ್ಗ ನೀಡಿ ಸನ್ಮಾನಿಸಲಾಯಿತು.

ಇನ್ನು ಇವತ್ತು ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಸಹಾ ಅಪ್ಪ ಸಿಎಂ ಆಗುವ ಬಗ್ಗೆ ಮಾತನಾಡಿದ್ದಾರೆ. ಅಪ್ಪನಿಗೆ ಸಿಎಂ ಆಗುವ ಎಲ್ಲಾ ಅವಕಾಶ ಇದೆ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿ ಸಿದ್ದರಾಮಯ್ಯ ವರುಣ‌ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು. ಹಿಂದೆ ಅವರು ವರುಣ ಕ್ಷೇತ್ರದಿಂದ ಶಾಸಕರಾಗಿದ್ದಾಗಲೇ ವಿರೋಧ ಪಕ್ಷದ ನಾಯಕರಾಗಿದ್ದು ಮತ್ತು ಮುಖ್ಯಮಂತ್ರಿ ಆಗಿದ್ದು ವರುಣ ಕ್ಷೇತ್ರ ಅವರಿಗೆ ಲಕ್ಕಿ ಆಗಿದೆ ಆದ್ದರಿಂದ ಇಲ್ಲೇ ಸ್ಪರ್ಧಿಸಲಿ ಅಂತಾ ಬಹಿರಂಗವಾಗಿಯೇ ಡಾ ಯತೀಂದ್ರ ಮನವಿ‌ ಮಾಡಿದ್ದಾರೆ.

ಅಷ್ಟೇ ಅಲ್ಲ ನಂಜನಗೂಡಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲೂ ಯತೀಂದ್ರ ತಂದೆ ವರುಣ ಕ್ಷೇತ್ರಕ್ಕೆ ಬರಲಿ ಅನ್ನೋ ಮಾತನ್ನು ಪುನರುಚ್ಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ಜನಪ್ರತಿನಿಧಿಗಳು ಹಾಗೂ ಮುಖಂಡರು ಸಿದ್ದು ಮುಂದಿನ ಸಿಎಂ ಆಗಲಿ ಅನ್ನೋ ಮಾತುಗಳನ್ನಾಡಿದ್ದಾರೆ. ಒಟ್ಟಾರೆ ದಿನೇ ದಿನೇ ಸಿದ್ದರಾಮಯ್ಯ ಮುಂದಿನ ಸಿಎಂ ಕೂಗು ಹೆಚ್ಚಾಗುತ್ತಿದ್ದು ಈ ಸಿದ್ದು ಸಿಎಂ ಜಪ ಕಾಂಗ್ರೆಸ್ ಪಕ್ಷದ ಇತರ ನಾಯಕರಿಗೆ ಒಂದು ರೀತಿ ಇರಿಸು ಮುರಿಸು ತರಿಸಿರೋದು ಖಂಡಿತಾ.

ಸುರೇಶ್ ಬಿ, ಪವರ್ ಟಿವಿ. ಮೈಸೂರು

RELATED ARTICLES

Related Articles

TRENDING ARTICLES