Wednesday, May 1, 2024

ಮಂಡ್ಯದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪ್ರಚಾರ!

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಕ್ಷೇತ್ರ ದಿನೇ ದಿನೇ ರಂಗೇರುತ್ತಿದ್ದು ನಟ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಇದೀಗ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಪರ ಪ್ರಚಾರ ನಡೆಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.​

ಇತ್ತೀಚೆಗೆ ಬಿಜೆಪಿ ಸೇರಿರುವ ಸಂಸದೆ ಸುಮಲತಾರನ್ನು ‘ಅಮ್ಮಾ’ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಇದೀಗ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಮುಂದಾಗಿದ್ದು ಕುತೂಹಲ ಸೃಷ್ಟಿಸಿದೆ. ಈ ಮಧ್ಯೆ, ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದ ಹೆಚ್​ಡಿ ಕುಮಾರಸ್ವಾಮಿ ಪರ ಸುಮಲತಾ ಇನ್ನೂ ಪ್ರಚಾರದ ಅಖಾಡಕ್ಕಿಳಿದಿಲ್ಲ.

ಬಿಜೆಪಿಯ ರಾಜ್ಯ, ಕೇಂದ್ರ ನಾಯಕರು ಹೇಳಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುವುದಾಗಿ ಸುಮಲತಾ ಹೇಳಿದ್ದರು. ಆದರೆ ಈವರೆಗೆ ಪ್ರಚಾರ ಮಾಡದೆ ಮೌನವಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಏ. 20 ರಂದು ರಾಜ್ಯಕ್ಕೆ ಮತ್ತೆ ಮೋದಿ ಆಗಮನ

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಕೊನೆಯವರೆಗೂ ಶ್ರಮಿಸಿದ್ದ ಸುಮಲತಾ ಕೊನೆಗೂ ಕಣದಿಂದ ಹಿಂದೆ ಸರಿದಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಜತೆ ಭಾಗವಹಿಸಿ ಮತಯಾಚನೆ ಮಾಡಿದ್ದರು. ಆದರೆ, ಇದೀಗ ಸುಮಲತಾರ ಮಾನಸ ಪುತ್ರ ದರ್ಶನ್ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಬೇಟೆಗೆ ಸಜ್ಜಾಗಿದ್ದಾರೆ.

ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಯಶ್ ಜತೆ ಜೋಡೆತ್ತಿನಂತೆ ನಿಂತಿದ್ದ ದರ್ಶನ್ ಸುಮಲತಾ ಪರ ಬೆವರು ಸುರಿಸಿ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಈಗ ಸುಮಲತಾ ಬಿಜೆಪಿಯಲ್ಲಿದ್ದರೂ ದರ್ಶನ್ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗುತ್ತಿರುವುದು ಸಾಕಷ್ಟು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Related Articles

TRENDING ARTICLES