Wednesday, May 8, 2024

ಮೋದಿ, ಶ್ರೀರಾಮನ ಅಲೆ ಯಾವುದು ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಫೋಟಕ ಸಂದರ್ಶನ

ಬೆಂಗಳೂರು : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಪ್ರಮುಖ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ಅದರಂತೆ, ರಾಜ್ಯ ರಾಜಕೀಯ ಪರಿಸ್ಥಿತಿ ಹಾಗೂ ಚುನಾವಣೆ ಸಿದ್ಧತೆಗಳ ಕುರಿತು ‘ಪವರ್​ ಟಿವಿ’ ನಡೆಸಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಆಡಳಿತ ಜನರಿಗೆ ಸಂತೃಪ್ತಿ ನೀಡಿಲ್ಲ. ಮೋದಿ ಅಲೆಯೂ ಇಲ್ಲ, ರಾಮನ ಅಲೆಯೂ ಇಲ್ಲ. ನುಡಿದಂತೆ ನಡೆದವರಿಗೆ ಜನ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯ ಅವರ ಆರೋಗ್ಯ ಹೇಗಿದೆ?

ಆರೋಗ್ಯ ಚೆನ್ನಾಗಿದೆ. ಬಿಸಿಲಿನ ಝಳ ಜಾಸ್ತಿ ಇರುವುದರಿದಂದ ಆರೋಗ್ಯ ಅಷ್ಟಾಗಿ ಸರಿ ಇಲ್ಲ. ಆದಾಗ್ಯೂ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ.

  • ಸಿದ್ದರಾಮಯ್ಯ ಗ್ಯಾರಂಟಿ vs ಮೋದಿ ಗ್ಯಾರಂಟಿ ಬಗ್ಗೆ ಏನು ಹೇಳುತ್ತೀರಿ?

ಕಾಂಗ್ರೆಸ್​ ಸರ್ಕಾರ ಈವರೆಗೆ 158 ಭರವಸೆಗಳನ್ನು ಈಡೇರಿಸಿದೆ. ಜೊತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಜನರಿಗೆ ಅರ್ಥ ಆಗಿದೆ, ಜನ ಲಾಭ ಪಡೆದಿದ್ದಾರೆ, ಅನುಭವ ಸಹ ಆಗಿದೆ. ಜನ ನಮ್ಮ ಪರವಾಗಿ ಇದ್ದಾರೆ. ಈಗ ಮೋದಿ ಅಲೆ ಇಲ್ಲ. ಬಿಜೆಪಿ ಸಂಸದರು ಮೋದಿ ಮೇಲೆ ಅವಲಂಬಿತರಾಗಿದ್ದಾರೆ. 10 ವರ್ಷದ ಆಡಳಿತದಲ್ಲಿ ಮೋದಿ ವಿಫಲರಾಗಿದ್ದಾರೆ.

  • ಅನುದಾನ ವಿಚಾರದಲ್ಲಿ ಕೇಂದ್ರದ ನಡುವೆ ಘರ್ಷಣೆ ನಡೆಯುತ್ತಿರುವ ಬಗ್ಗೆ ಏನಂತೀರಿ?

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು. ನಾವು ಕೊಡುವ ತೆರಿಗೆಗೆ ನ್ಯಾಯ ಸಿಗಬೇಕು. ಕನ್ನಡಿಗರಿಗೆ ಅನ್ಯಾಯವಾದಾಗ ಸುಮ್ಮನೆ ಇರಲ್ಲ. ದೆಹಲಿಗೆ ಹೋಗಿ ನಾವು ಪ್ರತಿಭಟನೆ ಮಾಡಿದ್ದೇವೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದಾರೆ. ಇದು ಮಲತಾಯಿ ಧೋರಣೆ.

  • ಇದು ಮೋದಿ vs ಸಿದ್ದರಾಮಯ್ಯ ಚುನಾವಣೆನಾ?

ನಾವು ನುಡಿದಂತೆ ನಡೆದಿದ್ದೇವೆ. ಜನರ ಆಶೀರ್ವಾದ ಇದ್ದಾಗ ಮಾತ್ರ ಗೆಲುವು ಸಾಧ್ಯ. ನುಡಿದಂತೆ ನಡೆದವರಿಗೆ ಜನರು ಆರ್ಶೀವಾದ ಮಾಡಬೇಕು. ನಮ್ಮ ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪ ಮಾಡಿ ಮತ ಕೇಳುತ್ತೇವೆ.

  • ಶ್ರೀರಾಮನ ಅಲೆ ಬಿಜೆಪಿಗೆ ವರವಾಗುತ್ತಾ?

ಶ್ರೀರಾಮನ ಅಲೆ ಇಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದಾರೆ. ಅದು ಸರ್ಕಾರದ ದುಡ್ಡು ಅಲ್ಲ. ನಾನೂ ರಾಮ ಭಜನೆ ಮಾಡಿದ್ದೇನೆ. ಎಲ್ಲರೂ ಶ್ರೀರಾಮನನ್ನು ಪೂಜೆ ಮಾಡುತ್ತಾರೆ. ಜನರು ಪ್ರಬುದ್ಧರಿದ್ದಾರೆ, ರಾಮನ ಹೆಸರು ಬಳಸಿ ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲ.

  • 100ಕ್ಕೆ 100ರಷ್ಟು ಸಾಮಾಜಿಕ ನ್ಯಾಯ ಸಾಧ್ಯವೇ?

100 ಕ್ಕೆ 100 ರಷ್ಟು ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆದರೂ ನಾವು ಕೈಬಿಡಲ್ಲ. ನಾವು ಐಡಿಯಾಲಜಿಕಲಿ ಸ್ಟ್ರಾಂಗ್ ಇದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸಿದ್ದೇವೆ. ಸಮಾಜದಲ್ಲಿ ಸಮಾನತೆ ತರದಿದ್ದರೆ ಅಪಾಯ ಖಂಡಿತ. ಜಾತಿ ವ್ಯವಸ್ಥೆಯೇ ಅಸಮಾನತೆಗೆ ಕಾರಣ.

  • ಸಿದ್ದು-ಡಿಕೆಶಿ ನಾಯಕತ್ವ ಹೇಗೆ ವರ್ಕೌಟ್ ಆಗುತ್ತಾ?

ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲರೂ ಅವಕಾಶ ವಂಚಿತರಾದವರಿಗೆ ಅವಕಾಶ ಕೊಡುತ್ತೇವೆ. ನಾನು ಕೊಡುವ ಗ್ಯಾರಂಟಿಗಳಿಂದ 4 ರಿಂದ 5 ಸಾವಿರ ಸಿಗುತ್ತದೆ. ಜೀವನ ನಡೆಸಲು ಸಾಧ್ಯವಾಗುತ್ತದೆ.

  • ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರ ನಿಮಗೆ ಪ್ರತಿಷ್ಠೆಯೇ?

28 ಕ್ಷೇತ್ರಗಳೂ ಚಾಲೆಂಜ್. ಹೆಚ್ಚು ಸ್ಥಾನ ಗೆಲ್ಲಬೇಕೆಂದರೆ, ಎಲ್ಲಾ ಕ್ಷೇತ್ರಗಳಿಗೂ ಹೋಗುತ್ತೇನೆ. ಮೈಸೂರಿನಿಂದ ಪ್ರಚಾರ ಪ್ರಾರಂಭಿಸಿದ್ದೇನೆ. ಮುಂಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ.

  • ನಿಮ್ಮ ರಾಜಕೀಯ ನಿವೃತ್ತಿ ಯಾವಾಗ?

ರಾಜಕೀಯ ನಿವೃತ್ತಿ ಅಂತ ಹೇಳಿಲ್ಲ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ನನಗೆ 77 ವರ್ಷ. ರಾಜಕೀಯಕ್ಕೆ ಬಂದು 46 ವರ್ಷ ಆಗಿದೆ. ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವೆ.

  • ಅನುದಾನ ವಿಚಾರದಲ್ಲಿ ಕೇಂದ್ರ ಮಲತಾಯಿ ಧೊರಣೆ ಅನುಸರಿಸುತ್ತಿದೆಯೇ?

ನಮ್ಮ ತೆರಿಗೆ ನಮ್ಮ ಹಕ್ಕು. ನಾವು ಸಂಘರ್ಷ ಮಾಡಬೇಕು ಅಂತ ಏನಿಲ್ಲ. ಅನ್ಯಾಯ ಆದಾಯ ಸರಿಪಡಿಸಿ ಎಂದರೆ ತಪ್ಪಿಪ್ಪ. ಪ್ರಧಾನಿ ಮೊದಿಯವರು ಗುಜರಾತ್ ಸಿಎಂ ಆದಾಗ ಕೇಂದ್ರದ ವಿರುದ್ಧ ಆರೋಪ ಮಾಡಿದ್ರು. ಸಿಎಂ ಇದ್ದಾಗ ಒಂದು ರೀತಿ, ಪ್ರಧಾನಿ ಆದಾಗ ಒಂದು ರೀತಿನಾ? ನಮ್ಮ ಪಾಲಿನ ಅನುದಾನ ನಾವು ಕೇಳಿದ್ದೇವೆ.

  • ಜೆಡಿಎಸ್-ಬಿಜೆಪಿ ಮೈತ್ರಿ ಕಾಂಗ್ರೆಸ್​ ಮೇಲೆ ಪ್ರಭಾವ ಬೀರುತ್ತಾ?

ಜೆಡಿಎಸ್ ಪಕ್ಷ ಕೋಮುವಾದಿಗಳ ಜೊತೆ ಕೈಜೋಡಿಸಿದೆ. ಸದಾ ಸೆಕ್ಯುಲರ್ ಎಂದು ಹೇಳುತ್ತಿದ್ದವರು ಬಿಜೆಪಿ ಜೊತೆ ಹೋಗಿದ್ದಾರೆ. ಅವರನ್ನು ಜನ ನಂಬುತ್ತಾರಾ? ಮೈತ್ರಿ ಒಪ್ಪದೇ ಜನ ನಮಗೆ ವೋಟು ಹಾಕುತ್ತಾರೆ. ಅವರ ಮೈತ್ರಿಯಿಂದ ನಮಗೆ ಹೆಚ್ಚು ಲಾಭ.

  • ದೇವೇಗೌಡ್ರು, ಸಿದ್ದರಾಮಯ್ಯನ ಗರ್ವಭಂಗ ಮಾಡಬೇಕು ಅಂದಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನೇರವಾಗಿ ಮಾತನಾಡುವುದು ಕೆಲವರಿಗೆ ಅಹಂಕಾರವಾಗಿ ಕಾಣುತ್ತದೆ. ನಾನು ದುರಹಂಕಾರಿಯಲ್ಲ. ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ಒಂದೇ ರೀತಿ ಇರುತ್ತೇನೆ. ದೇವೇಗೌಡರು ಅನುಭವಿ ರಾಜಕಾರಣಿ, ಅವರು ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ.

  • ನೀವು ಸಾಲ ಮಾಡಿ ಗ್ಯಾರಂಟಿ ಕೊಡುತ್ತಿದ್ದೀರಾ?

ಜಿಡಿಪಿಯ 25% ಒಳಗಡೆ ಸಾಲ ಇರಬೇಕು. ಇವರು ಅಧಿಕಾರದಲ್ಲಿದ್ದಾಗ ಸಾಲ ಮಾಡಿಲ್ವಾ? ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ಬಜೆಟ್​ನಲ್ಲಿ 75 ಸಾವಿರ ಕೋಟಿ ಸಾಲ ಪಡೆಯುತ್ತೇವೆ ಎಂದು ಹೇಳಿದ್ದರು. ನಾವು ಜಿಡಿಪಿಯ 25% ಒಳಗಡೆಯೇ ಸಾಲ ಮಾಡಿದ್ದೇವೆ.

  • ನೀವು ನೋಂದಣಿ ಶುಲ್ಕ ಜಾಸ್ತಿ ಮಾಡಿ, ದುಡ್ಡು ಮಾಡಿದ್ರಾ?

ಅದರಿಂದ ನಮ್ಮ ಟಾರ್ಗೆಟ್ ರೀಚ್ ಆಗಿಲ್ಲ. ಹಿಂದಿನ ಸರ್ಕಾರಗಳು ಐದಾರು ವರ್ಷದಿಂದ ಶುಲ್ಕ ಹೆಚ್ಚು ಮಾಡಿರಲಿಲ್ಲ. ನಾವು ಮಾಡಿದ್ದೇವೆ. ಮಾರುಕಟ್ಟೆ ದರ ಹೆಚ್ಚಾಗಿದೆ, ಬೆಲೆ ಹೆಚ್ಚಾದಾಗ ನೋಂದಣಿ ಶುಲ್ಕ ಹೆಚ್ಚಾಗುತ್ತದೆ.

  • ನಿಮ್ಮ ವರ್ಚಸ್ಸಿನಿಂದ ಜನ ನಿಮಗೆ 136 ಸ್ಥಾನ ಕೊಟ್ರಾ?

ಮೋದಿ ವಿಫಲತೆ ಬಗ್ಗೆ, ಗ್ಯಾರಂಟಿ ಬಗ್ಗೆ ಪ್ರಸ್ತಾಪ ಮಾಡಿದ್ದೆವು. ಜನ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ರು. ಹಾಗಾಗಿ 136 ಸೀಟು ಬಂತು. ಈ ಬಾರಿಯೂ ಜನ ನಮ್ಮ ಕೈ ಹಿಡಿಯುತ್ತಾರೆ.

  • ಬರ ಪರಿಹಾರದ ಎಫೆಕ್ಟ್ ಕಾಂಗ್ರೆಸ್​ ಮೇಲೆ ಪ್ರಭಾವ ಬೀರುತ್ತಾ?

ನಾವು ಬರವನ್ನು ಬಹಳ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಕುಡಿಯುವ ನೀರು, ದನಕರುಗಳಿಗೆ ಮೇವು, ಜನಗರಿಗೆ ಕೆಲಸ ನೀಡಿದ್ದೇವೆ. 34 ಲಕ್ಷ ರೈತರಿಗೆ ತಲಾ 2,000 ರೂ. ಪರಿಹಾರ ಕೊಟ್ಟಿದ್ದೇವೆ. ಉಳಿದದ್ದನ್ನು ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಎನ್​ಡಿಆರ್​ಎಫ್​ ದುಡ್ಡು ಬಂದಿಲ್ಲ ನಮಗೆ. 18,171 ಕೋಟಿ ಕೇಳಿದ್ದೇವೆ. 48 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ನಾಶವಾಗಿದೆ. 35 ಸಾವಿರ ಕೋಟಿ ನಷ್ಟವಾಗಿದೆ. ಬರ ಪರಿಹಾರ ಕೊಟ್ಟಿಲ್ಲ ಅಂತ ಸುಪ್ರೀಕೋರ್ಟ್​ಗೆ ಹೋಗಿದ್ದೇವೆ. 15 ದಿನಗಳಲ್ಲಿ ಪರಿಹಾರ ಮಾಡಿ ಎಂದು ನ್ಯಾಯಾಲಯ ಹೇಳಿದೆ.

  • ದೇಶವೇ ಮಂಡ್ಯ ಹಾಗೂ ಬೆಂ.ಗ್ರಾ ಫಲಿತಾಂಶವನ್ನು ಎದುರು ನೋಡುತ್ತಿದೆ, ಏನಾಗಬಹುದು?

ಕಳೆದ ಬಾರಿ ಕುಮಾರಸ್ವಾಮಿ ತಮ್ಮ ಮಗನನ್ನು ನಿಲ್ಲಿಸಿದ್ದರು. ಸಿಎಂ ಆಗಿದ್ದುಕೊಂಡು ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈ ಬಾರಿ ಕುಮಾರಸ್ವಾಮಿನೇ ಅಭ್ಯರ್ಥಿ. 8 ವಿಧಾನಸಭಾ ಕ್ಷೇತ್ರದಲ್ಲಿ ನಾವು 7ರಲ್ಲಿದ್ದೇವೆ. ಈ ಬಾರಿ 100ಕ್ಕೆ 100 ನಾವು ಗೆದ್ದೇ ಗೆಲುತ್ತೇವೆ.

ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಡಾ. ಮುಂಜುನಾಥ್ ಪಾಪ ಒಳ್ಳೆಯ ಡಾಕ್ಟರ್.​ ರಾಜಕೀಯಕ್ಕೆ ಅವರ ಕೊಡುಗೆ ಏನು? ದೇವೇಗೌಡ್ರು ಅಳಿಯನನ್ನು ಜೆಡಿಎಸ್​ನಿಂದ ನಿಲ್ಲಿಸದೇ ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಬಿ

  • ಬಿ.ಎಸ್​​ ಯಡಿಯೂರಪ್ಪ ಪ್ರಭಾವ ಬಿಜೆಪಿಗೆ ಎಷ್ಟು ಲಾಭ?

ಯಡಿಯೂರಪ್ಪ ಈ ಹಿಂದೆಯೂ ಇದ್ದರು. ಯಡಿಯೂರಪ್ಪ ಪ್ರಭಾವ, ವಿಜಯೇಂದ್ರ ಪ್ರಭಾವ ಅಂತ ಹೇಳಲು ಆಗಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಯಿತು.

  • ಬಿಜೆಪಿ 28ಕ್ಕೆ 28 ಅಂತ ಹೇಳುತ್ತಿದೆ! ನಿಮ್ಮ ಸಂಖ್ಯೆ ಎಷ್ಟು?

ನಾವು ಅವರಂತೆ ಸುಳ್ಳು ಹೇಳಲ್ಲ. 15 ರಿಂದ 20 ಸೀಟು ಗೆಲ್ಲುತ್ತೇವೆ. ಮೈಸೂರು ಗೆಲ್ಲುತ್ತೇವೆ, ಚಾಮರಾಜನಗರವನ್ನೂ ಗೆಲ್ಲುತ್ತೇವೆ.

  • ನೀವು ಪವರ್ ಟಿವಿ ಮೂಲಕ ಮತದಾರರಿಗೆ ಏನು ಸಂದೇಶ ಕೊಡುತ್ತೀರಿ?

ಜನರು ಬುದ್ದಿವಂತರು. ಯಾರು ಸತ್ಯ ಹೇಳುತ್ತಾರೆ, ನುಡಿದಂತೆ ನಡೆಯುತ್ತಾರೆ ಅವರನ್ನು ಜನ ಬೆಂಬಲಿಸುತ್ತಾರೆ. ನುಡಿದಂತೆ ನಡೆದವರಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ.

RELATED ARTICLES

Related Articles

TRENDING ARTICLES