Monday, May 20, 2024

ಸಂತ್ರಸ್ತೆ ಅಪಹರಣ ಆರೋಪ : ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ಇಂದು (ಮೇ 8) ವಿಚಾರಣೆಗೆ ಬರಲಿದೆ.

ಬುಧವಾರ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಕಸ್ಟಡಿ ಅಂತ್ಯವಾಗುವ ಸಾಧ್ಯತೆ ಹಿನ್ನೆಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಇನ್ನಷ್ಟು ದಿನ ಕಸ್ಟಡಿಗೆ ಕೊಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಲಿದ್ದಾರೆ. ಈಗಷ್ಟೇ ವಿಚಾರಣೆಯನ್ನು ಪ್ರಾರಂಭ ಮಾಡಲಾಗಿದೆ. ಅಲ್ಲದೆ, ರೇವಣ್ಣ ಸಹ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ವಾದಿಸುವ ಸಾಧ್ಯತೆ ಹೆಚ್ಚಿದೆ.

 

ಇನ್ನು ಜಾಮೀನು ಅರ್ಜಿ ವಿಚಾರಣೆ ಸಂಬಂಧ ನ್ಯಾಯಾಲಯ ಸಹ ಒಂದು ಪ್ರಶ್ನೆ ಎತ್ತಿದೆ. ಆರೋಪಿ ಕಸ್ಟಡಿಯಲ್ಲಿದ್ದಾಗ ಜಾಮೀನು ಅರ್ಜಿ ವಿಚಾರಣೆ ನಡೆಸಲು ಯೋಗ್ಯವೇ ಎಂಬ ಬಗ್ಗೆ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶ್ನೆ ಮಾಡಿದೆ. ಆಗ ಈ ಬಗ್ಗೆ ರೇವಣ್ಣ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.‌ ನಾಗೇಶ್ ಅವರು ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಿದ್ದು, ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ವೇಳೆ ರೇವಣ್ಣ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಒಂದು ವೇಳೆ ಜಾಮೀನು ಸಿಕ್ಕಿಲ್ಲವಾದರೆ, ಪುನಃ ಕಸ್ಟಡಿಗೆ ನೀಡಲಾಗುತ್ತದೆಯೋ? ಅಥವಾ ನ್ಯಾಯಾಂಗ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಸೇರಲಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES