Tuesday, April 30, 2024

Powertv Review: ಮತ್ತೆ ಬಂದ ಅವತಾರ ಪುರುಷ..ಹೇಗಿದೆ ತ್ರಿಶಂಕು ಲೋಕ..?

ಫಿಲ್ಮಿಡೆಸ್ಕ್: ಶರಣ್ ನಟನೆಯ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ 2 ಸಿನಿಮಾ ಇವತ್ತು ತೆರೆಗೆ ಬಂದಿದೆ. ಎರಡು ವರ್ಷಗಳ ಹಿಂದೆ ಬಂದಿದ್ದ ಅವತಾರ ಪುರುಷ ಚಿತ್ರದ ಸೀಕ್ವೆಲ್​​ ಆಗಿರೋ ಈ ಸಿನಿಮಾದಲ್ಲಿ ತ್ರಿಶಂಕು ಪಯಣದ ಕಥೆ ಹೇಳಲಾಗಿದೆ. ಕಾಮಿಡಿ ಮತ್ತು ಮಂತ್ರ ತಂತ್ರದ ಕಥೆ ಬೆರೆತಿರೋ ಈ ಸಿನಿಮಾ ಹೇಗೆ ಮೂಡಿಬಂದಿದೆ? ಬ್ಲ್ಯಾಕ್ ಮ್ಯಾಜಿಕ್ ಕುರಿತ ಚಿತ್ರ ಪ್ರೇಕ್ಷಕರಿಗೆ ಮ್ಯಾಜಿಕ್ ಮಾಡುತ್ತಾ? ಇಲ್ಲಿದೆ ಮಾಹಿತಿ.

ಚಿತ್ರ : ಅವತಾರ ಪುರುಷ -2, ನಿರ್ದೇಶನ : ಸಿಂಪಲ್ ಸುನಿ, ನಿರ್ಮಾಣ : ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಂಗೀತ : ಅಭಿನಂದನ್ ಕಶ್ಯಪ್, ಸಿನಿಮಾಟೋಗ್ರಫಿ : ವಿಲಿಯಂ ಡೆವಿಡ್

ತಾರಾಗಣ :

ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಾಣಿ, ಅಶುತೋಶ್ ರಾಣಾ, ಬಾಲಾಜಿ ಮನೋಹರ್, ಸಾಧುಕೋಕಿಲ ಮತ್ತು ಇತರರು.

ಅವತಾರ ಪುರುಷ 2 ಕಥಾಹಂದರ :

ಅವತಾರ ಪುರುಷ-1 ಸಿನಿಮಾವನ್ನ ನೀವು ನೋಡಿದ್ರೆ ಮೊದಲ ಭಾಗದ ಕಥೆ ಗೊತ್ತೇ ಇರುತ್ತೆ. ಒಂದು ವೇಳೆ ಅದನ್ನ ಮರೆತಿದ್ರೂ ಅವತಾರ ಪುರುಷ -1 ರಿಕ್ಯಾಪ್​​ನ ಈ ಚಿತ್ರದ ಆರಂಭದಲ್ಲೇ ಮಾಡಲಾಗುತ್ತೆ. ಹಣಕ್ಕಾಗಿ ರಾಮಾಜೋಯಿಸರ ಮಗನಂತೆ ಆ್ಯಕ್ಟ್ ಮಾಡೋದಕ್ಕೆ ಹೋಗಿದ್ದ ಜ್ಯೂನಿಯರ್ ಆರ್ಟಿಸ್ಟ್ ಅನೀಲ ವಾಪಾಸ್ ಬಂದಿದ್ದಾನೆ. ರಾಮಾಜೋಯಿಸರ ನಿಜವಾದ ಮಗ ಕುಮಾರ ಮನೆ ಸೇರಿದ್ದಾನೆ. ತಾಯಿ ಯಶೋದೆಯ ಒತ್ತಾಯದ ಮೇರೆಗೆ ಅನೀಲ ಮತ್ತೆ ರಾಮಾಜೋಯಿಸರ ಮನೆ ಸೇರ್ತಾನೆ. ಇಲ್ಲಿ ಕುಮಾರ ಮತ್ತು ಅನೀಲ ಇಬ್ಬರೂ ಆ ಮನೆಗೆ ಹೋಗಿರೋದು ತ್ರಿಶಂಕು ಮಣಿಯನ್ನ ಪಡೆಯೋದಕ್ಕೆ. ಇನ್ನೊಂದೆಡೆ ಮಹಾ ಮಾಂತ್ರಿಕ ದಾರಕ ಕೂಡ ರಾಮಾಜೋಯಿಸರ ಮನೆಯಲ್ಲಿರೋ ತ್ರಿಶಂಕು ಮಣಿಯನ್ನ ಪಡೆಯೋದಕ್ಕೆ ನಾನಾ ಕಸರತ್ತು ಮಾಡ್ತಾ ಇದ್ದಾನೆ. ತ್ರಿಶಂಕು ಮಣಿಗಾಗಿ ಏನೆಲ್ಲಾ ನಡೆಯುತ್ತೆ. ಕೊನೆಗೂ ಮಣಿ ಪಡೆದು ತ್ರಿಶಂಕು ಸ್ವರ್ಗಕ್ಕೆ ಹೋಗೋದು ಯಾರು? ಇದೆಲ್ಲಾ ಗೊತ್ತಾಗಬೇಕು ಅಂದ್ರೆ ನೀವು ಈ ಸಿನಿಮಾ ನೋಡಬೇಕು.

ಇದನ್ನೂ ಓದಿ: ಕೀಳುಮಟ್ಟದ ಟ್ವೀಟ್‌: ʻದರ್ಶನ್ʼ​ ಫ್ಯಾನ್ಸ್ ವಿರುದ್ಧ ದೂರು ನೀಡಲು ಮುಂದಾದ ಅಪ್ಪು ಅಭಿಮಾನಿಗಳು!

ಅವತಾರ ಪುರುಷ 2 ಕಲಾವಿದರ ಪರ್ಫಾರ್ಮೆನ್ಸ್ :

ಶರಣ್ ಒಂದು ಕಡೆ ಓವರ್​ ಆ್ಯಕ್ಟಿಂಗ್ ಅನೀಲನಾಗಿ ಮತ್ತೊಂದು ಕಡೆ ಮಂತ್ರಪುರುಷನಾಗಿ ಮೋಡಿ ಮಾಡ್ತಾರೆ. ಸಾಯಿಕುಮಾರ್, ಸುಧಾರಾಣಿ, ಭವ್ಯ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ಆಶಿಕಾಗೆ ಇಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲ. ಶ್ರೀನಗರ ಕಿಟ್ಟಿ ಕೆಲವೇ ದೃಶ್ಯಗಳಲ್ಲಿ ಬಂದ್ರೂ ತಮ್ಮ ಲುಕ್, ಪರ್ಫಾರ್ಮೆನ್ಸ್​ನಿಂದ ಮೋಡಿ ಮಾಡ್ತಾರೆ. ಸಾಧು ಎಂದಿನಂತೆ ನಗಿಸ್ತಾರೆ. ಖಳರ ಪಾತ್ರಗಳಲ್ಲಿ ಅಶುತೋಷ್ ರಾಣಾ, ಬಾಲಾಜಿ ಮನೋಹರ್ ಬೆಚ್ಚಿಬೀಳಿಸ್ತಾರೆ.

ಅವತಾರ ಪುರುಷ -2 ಪ್ಲಸ್ ಪಾಯಿಂಟ್ಸ್ :

  • ಕಲಾವಿದರುಗಳ ಆಯ್ಕೆ
  • ಸುನಿ ಪಂಚಿಂಗ್ ಸಂಭಾಷಣೆ
  • ರೋಚಕ VFX ದೃಶ್ಯಗಳು
  • ವಿಲಿಯಂ ಡೆವಿಡ್ ಸಿನಿಮಾಟೋಗ್ರಫಿ
  • ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ

ಅವತಾರ ಪುರುಷ -2 ಮೈನಸ್ ಪಾಯಿಂಟ್ಸ್ :

ಅವತಾರ ಪುರುಷ-2 ಸಿನಿಮಾದ ಮೊದಲಾರ್ಧ ಕಾಮಿಡಿ ಜೊತೆ ಲವಿಲವಿಕೆಯಿಂದ ಸಾಗ್ತಾ ಬಹುಬೇಗನೇ ಮುಗಿದು ಹೋದಂತೆ ಭಾಸವಾಗುತ್ತೆ. ಆದ್ರೆ ದ್ವಿತಿಯಾರ್ಧದಲ್ಲಿ ಸಂಪೂರ್ಣ ಮಾಟ ಮಂತ್ರ ತಂತ್ರದ ದೃಶ್ಯಗಳೇ ತುಂಬಿದ್ದು ಪ್ರೇಕ್ಷಕರ ಸಹನೆ  ಜೊತೆ ಆಟ ಆಡುತ್ತೆ. ಶ್ರೀನಗರ ಕಿಟ್ಟಿ ಪಾತ್ರಕ್ಕೆ ಭರ್ಜರಿ ಬಿಲ್ಡ್​ಅಪ್ ಕೊಟ್ಟಿದ್ದನ್ನ ನೋಡಿ ಸೀಕ್ವೆಲ್​ನಲ್ಲಿ ಅವರೇ ವಿಲನ್ ಅಂದುಕೊಂಡವರಿಗೆ ಶಾಕ್ ಆಗುತ್ತೆ. ಕಿಟ್ಟಿ, ಸುಧಾರಾಣಿ ಪಾತ್ರಗಳನ್ನ ಸಡನ್​ ಆಗಿ ಅಂತ್ಯಗಾಣಿಸಿದ ರೀತಿ ಪ್ರೇಕ್ಷಕರಿಗೆ ಕೊಂಚ ಇರಿಸು ಮುರಿಸು ಉಂಟುಮಾಡುತ್ತೆ.

ಅವತಾರ ಪುರುಷ – 2 ಚಿತ್ರಕ್ಕೆ ಪವರ್ ಟಿವಿ ರೇಟಿಂಗ್ :

5 ಕ್ಕೆ 3 ಸ್ಟಾರ್ಸ್

ಅವತಾರ ಪುರುಷ -2 ಫೈನಸ್ ಸ್ಟೇಟ್​ಮೆಂಟ್ :

ಅವತಾರ ಪುರುಷ -1 ತೆರೆಗೆ ಬಂದಿದ್ದು ಬರೊಬ್ಬರಿ ಎರಡು ವರ್ಷಗಳ ಹಿಂದೆ. 2 ವರ್ಷಗಳ ನಂತರ ಸೀಕ್ವೆಲ್ ತೆರೆಗೆ ಬಂದ್ರೂ ಎಲ್ಲೂ ಮಿಸ್ ಆಗದಂತೆ ಚಿತ್ರವನ್ನ ನೀಟ್ ಆಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ಕಾಮಿಡಿ ಜೊತೆ ಜೊತೆಗೆ ಮಂತ್ರ ತಂತ್ರವಿದ್ಯೆಯ ಕಹಾನಿಯುಳ್ಳ ಈ ಸಿನಿಮಾ ಫನ್ ಜೊತೆಗೆ ಥ್ರಿಲ್ ಕೂಡ ಕೊಡುತ್ತೆ. ಅದ್ಭುತ ಕಲಾವಿದರು, ತಂತ್ರಜ್ಞರ ಈ ಸಿನಿಮಾವನ್ನ ಒಂದು ಸಾರಿ ಖಂಡಿತ ಥಿಯೇಟರ್​​ನಲ್ಲಿ ನೋಡಿ ಎಂಜಾಯ್ ಮಾಡಬಹುದು.

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES