Friday, May 17, 2024

ಮೋದಿಗೆ ಹೆಣ್ಣುಮಕ್ಕಳ ಬಗ್ಗೆ ಕಾಳಜಿಯಿದ್ದರೆ ಪ್ರಜ್ವಲ್ ರೇವಣ್ಣನನ್ನು ಎಳೆತಂದು ಶಿಕ್ಷೆ ಕೊಡಿಸಲಿ: AAP

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ದೇಶ ಮಟ್ಟದಲ್ಲಿ ರಾಜ್ಯಕ್ಕೆ ಕಳಂಕ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಹೆಣ್ಣು ಮಕ್ಕಳ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಎಳೆದುಕೊಂಡು ಬಂದು ಈ ನೆಲದ ಕಾನೂನಿನಂತೆ ಶಿಕ್ಷೆ ನೀಡಲಿ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದರು.

ವಿದೇಶಕ್ಕೆ ಪರಾರಿ ಆಗಿರುವ ಕಾಮ ಪಿಶಾಚಿ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿ ಪಕ್ಷದ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮೋಹನ್ ದಾಸರಿ, ಇದು ಇಡೀ ದೇಶದ ದೊಡ್ಡ ಲೈಂಗಿಕ ಹಗರಣ, ಹಾಸನ ಜಿಲ್ಲೆಯಲ್ಲಿ ಇಂತಹ ಹಗರಣ ನಡೆದಿರುವುದು ರಾಜ್ಯವನ್ನು ತಲೆತಗ್ಗಿಸುವಂತೆ ಮಾಡಿದೆ. ಮುನ್ನೂರಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ, ಅಪ್ರಾಪ್ತ ಮೇಲೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. 3000 ಕ್ಕೂ ಹೆಚ್ಚು ವಿಡಿಯೋಗಳಿವೆ ಎನ್ನಲಾಗಿದೆ. ಇದೇನಾ ಪ್ರಧಾನಿ ಮೋದಿ ಹೇಳುವ ‘ಭೇಟಿ ಪಡಾವೋ ಭೇಟಿ ಬಚಾವೋ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಪೆನ್​ ಡ್ರೈವ್​ ಬಿಡೋ ಚಿಲ್ಲರೆ ಕೆಲಸ ನಾನು ಮಾಡಲ್ಲ, ಚುನಾವಣೆ ಎದುರಿಸುತ್ತೇನೆ: ಡಿಕೆ ಶಿವಕುಮಾರ್​

ಇದುವರೆಗೂ ಒಂದಿಬ್ಬರು ಮಾತ್ರ ದೂರು ನೀಡಿದ್ದಾರೆ, ಆದರೆ ಎಸ್‌ಐಟಿ ವಿಡಿಯೋಗಳಲ್ಲಿರುವ ಎಲ್ಲಾ ಸಂತ್ರಸ್ತ ಮಹಿಳೆಯರ ಹತ್ತಿರ ಮಾತನಾಡಿ, ಅವರಿಗೆ ರಕ್ಷಣೆ ಕೊಡಬೇಕು. ಪೋಸ್ಕೊ ಪ್ರಕರಣ ದಾಖಲಿಸಬೇಕು. ಒಂದೆರಡು ಎಫ್‌ಐಆರ್ ಹಾಕಿದರೆ ಕೇಸ್ ನಿಲ್ಲಲ್ಲ, ಎಲ್ಲಾ ಮಹಿಳೆಯರು ಧೈರ್ಯವಾಗಿ ಮುಂದೆ ಬಂದು ವಾಸ್ತವ ಹೇಳಿ. ಕಾಮ ಪಿಸಾಚಿ ಪ್ರಜ್ವಲ್ ರೇವಣ್ಣ ಬದುಕಿರಲು ಅರ್ಹನಲ್ಲ, ಆತನನ್ನು ಗಲ್ಲಿಗೇರಿಸಬೇಕು. ಆತನ ಕೃತ್ಯಗಳು ಪ್ರಧಾನಿ ಮೋದಿ ಅವರಿಗೆ ಮೊದಲೇ ಗೊತ್ತಿರಲಿಲ್ಲವಾ? ಬಿಜೆಪಿ ವರಿಷ್ಠರಿಗೆ ಗೊತ್ತಿತ್ತು ಎಂಬುದನ್ನು ಎಚ್.ಡಿ.ಕುಮಾರಸ್ವಾಮಿ ಅವರೇ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ವಿಚಾರ ಗೊತ್ತಿದ್ದರೂ ಆತನಿಗೆ ಟಿಕೆಟ್ ಕೊಟ್ಟಿದ್ದೇಕೆ? ಆತನ ಪರವಾಗಿ ಏಕೆ ಪ್ರಚಾರ ಮಾಡಿದ್ದೇಕೆ? ಎಂದು ಮೋಹನ್ ದಾಸರಿ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ರಮೇಶ್ ಬೆಳ್ಳಂಕೊಂಡ , ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ವೀಣಾ ಸರಾವು, ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್ ಕುಮಾರ್, ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ, ಹರಿಹರನ್, ಗೋಪಾಲ್ ಮಹಿಳಾ ಮುಖಂಡರುಗಳಾದ ಮಹಾಲಕ್ಷ್ಮಿ, ಅಂಜನ ಗೌಡ, ಭಾನುಪ್ರಿಯ, ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ಜ್ಯೋತಿಶ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES