Saturday, April 27, 2024

ಶಿವಕುಮಾರಣ್ಣ.. ಪಾದಯಾತ್ರೆಯಿಂದ ನೀರು ತರಲು ಆಗಲ್ಲಣ್ಣ : ಕುಮಾರಸ್ವಾಮಿ

ಮಂಡ್ಯ : ಮೇಕೆದಾಟು ಹೆಸರೇಳಿ ರಾಜಕಾರಣ ಮಾಡುವ ದರಿದ್ರ ದೇವೇಗೌಡರಿಗೆ ಬಂದಿಲ್ಲ. ಪಾದಯಾತ್ರೆಯಿಂದ ನೀರು ತರಲು ಆಗಲ್ಲ ಶಿವಕುಮಾರಣ್ಣ. ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕುಟುಕಿದರು.

ಮಂಡ್ಯದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿರಿಯಾನಿ ತಿಂದು ಪಾದಯಾತ್ರೆ ಮಾಡಿದ್ರೆ ಆಗಲ್ಲ. ಹೆಚ್ಚಿನ ಸೀಟು ಪಡೆಯಲು ಅಮಿತ್ ಶಾ ಭೇಟಿ ಮಾಡಲಿಲ್ಲ. ಮೇಕೆದಾಟು ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂದು ಚರ್ಚೆ ಮಾಡಲು ಹೋಗಿದ್ದೆವು ಎಂದು ಚಾಟಿ ಬೀಸಿದರು.

ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದ್ರಿ, ಇವತ್ತು ಏನಾಗಿದೆ? ಮೇಕೆದಾಟು ಕಟ್ಟಲು ಅನುಮತಿ ಕೇಳ್ತಿದ್ದಾರೆ‌. ಮತ್ತೆ ಅವತ್ತು ಪಾದಯಾತ್ರೆ ಯಾಕೆ ಮಾಡಿದ್ರಿ‌? ನಿಮ್ಮ ಅಂಗ ಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಕಟ್ಟಲು ಅವಕಾಶ ಕೊಡಲ್ಲ ಎಂದಿದ್ದಾರೆ. ಪೇಪರ್, ಪೆನ್ನು ಕೊಟ್ರೆ ನಾಳೆ ಬೆಳಗ್ಗೆ ಮೇಕೆದಾಟು ಮಾಡ್ತೀನಿ ಎಂದರಲ್ಲ. ಈಗ ಏನಾಗಿದೆ, ಮೇಕೆದಾಟು ಯೋಜನೆ ಮಾಡಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ದೇವೇಗೌಡ್ರನ್ನ ಹೀಯಾಳಿಸುತ್ತಾರೆ

ನರೇಂದ್ರ ಮೋದಿ ಪ್ರಧಾನಿಯಾದ್ರೆ ದೇಶ ಬಿಡುತ್ತೇನೆ ಎಂದಿರಲಿಲ್ಲ. ರಾಜ್ಯಸಭೆಗೆ ರಾಜೀನಾಮೆ ಕೊಡ್ತೀನಿ ಎಂದಿದ್ರು. ಆದರೆ, ಆ ಬಳಿಕ ಮೋದಿ ಅವರನ್ನು ಭೇಟಿಯಾದ ದೇವೇಗೌಡರಿಗೆ ಗೌರವ ಕೊಟ್ರು. ಚುನಾವಣೆ ಸಮಯದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರು. ಮೋದಿ ಅವರು ದೇವೇಗೌಡರನ್ನ ತಂದೆ ಸಮನಾರಾಗಿ ನಡೆಸಿಕೊಳ್ತಾರೆ. ಆದರೆ ಸಿದ್ದರಾಮಯ್ಯ ದೇವೇಗೌಡರನ್ನು ಹೀಯಾಳಿಸುತ್ತಾರೆ. ಇದು ಸಿದ್ದರಾಮಯ್ಯಗೂ ಮೋದಿಗೂ ಇರುವ ವ್ಯತ್ಯಾಸ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ನಿಮ್ಮಿಂದ ಜೆಡಿಎಸ್‌ ಪಕ್ಷವನ್ನು ಮುಗಿಸಲು ಆಗಲ್ಲ

ಕಾಂಗ್ರೆಸ್ ಎಷ್ಟೇ ಶ್ರಮವಹಿಸಿದ್ರು ಜೆಡಿಎಸ್‌ ಪಕ್ಷವನ್ನು ಮುಗಿಸಲು ಆಗಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅನಿವಾರ್ಯ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ತಾರೆ. ಮಂಡ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಾದರೆ ಐತಿಹಾಸಿಕ ಗೆಲುವು ನಿಶ್ಚಿತ ಎಂದು ಹೆಚ್​.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES