Sunday, May 5, 2024

ಸಂಸದ ರಾಘವೇಂದ್ರರಿಗೆ ‘ಹಡಬಿಟ್ಟಿ’ ಪದ ಬಳಕೆ : ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಕಿಡಿ

ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಟೀಕಿಸುವ ಬರದಲ್ಲಿ ‘ಹಡಬಿಟ್ಟಿ’ ಎಂಬ ಪದ ಬಳಕೆ ಮಾಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಮಧು ಬಂಗಾರಪ್ಪ ಅವರು ಒಬ್ಬ ಶಿಕ್ಷಣ ಸಚಿವರಾಗಿ ಹೇಗೆ ಮಾತನಾಡಬೇಕು ಎಂಬ ಪ್ರಜ್ಞೆಯೇ ಇಲ್ಲವಾಗಿದೆ. ರಾಘವೇಂದ್ರ ಅವರನ್ನು ಟೀಕಿಸುವಾಗ ಹಡಬಿಟ್ಟಿ ಎಂಬ ಪದವನ್ನು ಉಪಯೋಗಿಸಿದ್ದಾರೆ. ಏನಿದರ ಅರ್ಥ? ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ವಾಗ್ದಾಳಿ ನಡೆಸಿದ್ದಾರೆ.

ಮಧುಬಂಗಾರಪ್ಪ ಅವರಿಗೆ ಸಜ್ಜನಿಕೆ ಇಲ್ಲ. ಮಾತಿನಲ್ಲಿ ಇಡಿತವಿಲ್ಲ. ವೈಯುಕ್ತಿಕ ತೇಜೋವಧೆ ಮಾಡಬಾರದು ಎಂದು ಗೊತ್ತಿಲ್ಲ. ಇದು ಪ್ರಜ್ಞಾವಂತರ ನೆಲ. ಅಸಭ್ಯ ರೀತಿಯಲ್ಲಿ ಅವರು ಮಾತನಾಡುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಅವರಿಗೆ ಈ ಬಾರಿ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಕುಟುಕಿದ್ದಾರೆ.

ಬಹಿರಂಗ ಚರ್ಚೆಗೆ ನಾವು ಸಿದ್ದವಿದ್ದೇವೆ

ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಬಿ.ವೈ. ರಾಘವೇಂದ್ರ ಅವರನ್ನು ಬಸ್ಟ್ಯಾಂಡ್ ರಾಘು ಎಂದು ಕರೆದಿದ್ದಾರೆ. ಅವರಿಗೆ ಗೊತ್ತಿರಲಿ, ರಾಘವೇಂದ್ರ ಅವರು ಬಸ್ಟ್ಯಾಂಡ್ ರಾಘುನು ಹೌದು, ವಿಮಾನ ನಿಲ್ದಾಣ ರಾಘುನೂ ಹೌದು, ರೈಲ್ವೆ ನಿಲ್ದಾಣದ ರಾಘುನೂ ಹೌದು, ರಾಘವೇಂದ್ರ ಅವರು ಯಾವ ಅಭಿವೃದ್ಧಿ ಮಾಡಿಲ್ಲ ಎಂದು ಅವರು ಹೇಳುತ್ತಾರೆ. ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ದವಿದ್ದೇವೆ ಎಂದ ಅವರು, ಬೇಳೂರಿನ ಹಾಗೆ ಗುದ್ದಲಿ ಗೋಪಾಲ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಟೀಕಿಸುವ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲ

ಪ್ರಧಾನಿ ಮೋದಿಯವರನ್ನು ಟೀಕಿಸುವ ಹಕ್ಕು ಈ ಕಾಂಗ್ರೆಸ್ಸಿಗರಿಗೆ ಇಲ್ಲ. ಯಾವುದೇ ಅರ್ಹತೆ ಅವರಿಗಿಲ್ಲ. ಇವರನ್ನು ಟೀಕಿಸಿದರೆ ಪ್ರಚಾರಕ್ಕೆ ಬರಬಹುದು ಎಂದು ಅಂದುಕೊಂಡಿದ್ದಾರೆ. ಅದು ಸುಳ್ಳು, ಈಗಾಗಲೇ ಅವರು ಹತಾಶರಾಗಿದ್ದಾರೆ. ಇವಿಎಂ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ವಿದ್ಯಾ ಮಂತ್ರಿಗೆ ದೂರ ದೃಷ್ಠಿಯೇ ಇಲ್ಲ

ಮಧು ಬಂಗಾರಪ್ಪ ಅವರಿಗೆ ಶಿಕ್ಷಣದ ಬಗ್ಗೆ ದೂರ ದೃಷ್ಠಿಯೇ ಇಲ್ಲ. ಸಣ್ಣ ಮಕ್ಕಳಿಗೆ ಪರೀಕ್ಷೆ ಮಾಡುವುದು, ಬಿಡುವುದು ಮಾಡುತ್ತಾರೆ. ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುವುದು ಅವರಿಗೆ ಗೊತ್ತಿಲ್ಲ. ಅವರಿಗೆ ದೂರದೃಷ್ಠಿ ಹೀನತೆ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

RELATED ARTICLES

Related Articles

TRENDING ARTICLES