Friday, May 10, 2024

ಈಶ್ವರಪ್ಪ ಮ್ಯಾಟರ್ ಯಡಿಯೂರಪ್ಪ ನೋಡಿಕೊಳ್ತಾರೆ : ಸಿ.ಟಿ. ರವಿ

ಬೆಂಗಳೂರು : ಈಶ್ವರಪ್ಪ ಕುರಿತ ವಿಚಾರ ಎಲ್ಲರಿಗಿಂತ ಸಮರ್ಥವಾಗಿ ಯಡಿಯೂರಪ್ಪ ಅವರೇ ನಿರ್ವಹಣೆ ಮಾಡ್ತಾರೆ. ಆ ವಿಶ್ವಾಸ ನಮಗೆ ಇದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಈಶ್ವರಪ್ಪ 45 ವರ್ಷ ಜತೆಯಾಗಿ ರಾಜಕೀಯ ಸಂಬಂಧ ಇಟ್ಕೊಂಡು ಕೆಲಸ ಮಾಡಿದವರು ಎಂದರು.

ಡಿ.ವಿ. ಸದಾನಂದ ಗೌಡ್ರು ಅಸಮಧಾನ ಎಂಬುದು ಊಹಾಪೋಹದ ವಿಚಾರ. ಸದಾನಂದ ಗೌಡ್ರು ನಮ್ಮ ಹಿರಿಯ ನಾಯಕರು, ಸಿಎಂ ಆಗಿದ್ದವರು. ಇಂಥ ಸಂದರ್ಭಗಳಲ್ಲಿ ಉಳಿದ ಕಾರ್ಯಕರ್ತರಲ್ಲಿ ಯಾವ ರೀತಿ ಸಮಾಧಾನ ಮಾಡ್ತಿದ್ದರು ಅಂತ ಗೊತ್ತಿರುವವರು. ಈ ಹಿನ್ನೆಲೆಯಲ್ಲಿ ಸದಾನಂದ ಗೌಡ್ರು ಅಸಮಾಧಾನ ಆಗ್ತಾರೆ ಅನ್ನೋದು ಊಹಾಪೋಹದ ಮಾತು ಎಂದು ತಿಳಿಸಿದರು.

ದೆಹಲಿ ಮಟ್ಟದಲ್ಲೇ ಇದಕ್ಕೂ ಪರಿಹಾರ ಆಗುತ್ತೆ

ಮೈತ್ರಿ ಸೀಟು ಹಂಚಿಕೆ ಬಗ್ಗೆ ಕುಮಾರಸ್ವಾಮಿ ಅಸಮಧಾನಗೊಂಡಿರುವ ಬಗ್ಗೆ ಮಾತನಾಡಿದ ಅವರು, ಮೈತ್ರಿ ಕುರಿತ ಮಾತುಕತೆ ನಡೆದಿರುವುದೇ ದೆಹಲಿ ಮಟ್ಟದಲ್ಲಿ. ದೆಹಲಿಯಲ್ಲಿ ಏನು ಮಾತುಕತೆ ಆಗಿದೆ ಅಂತ ನಮಗೆ ಗೊತ್ತಿಲ್ಲ. ದೆಹಲಿ ಮಟ್ಟದಲ್ಲೇ ಇದಕ್ಕೂ ಪರಿಹಾರ ಆಗಲಿದೆ. ಮೈತ್ರಿ ಬಗ್ಗೆ ಎಲ್ಲ‌ ಜಿಲ್ಲೆಗಳಲ್ಲೂ ಕೆಳಹಂತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಹಮತ ಮೂಡಿಸುವ ಅಗತ್ಯ ಇದೆ. ಜಂಟಿ ಕೋರ್ ಕಮಿಟಿ ಸಭೆ ಆಗಬೇಕು, ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಈಗಾಗಲೇ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಆಗುತ್ತೆ

ದೆಹಲಿಯಲ್ಲಿ ಸಿಇಸಿ ಸಭೆ ಇದೆ. ಮೈತ್ರಿಕೂಟದ ಉಳಿದ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಆಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದೆ. ಕಲಬುರ್ಗಿಯಲ್ಲಿ, ಶಿವಮೊಗ್ಗದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತ ಆಗಿದೆ. ಇದನ್ನ ನೋಡಿದರೆ ಅಲೆ ಬಿಜೆಪಿ ಪರ, ಪ್ರಧಾನಿ ಮೋದಿ ಪರ ಇದೆ ಅಂತ ಗೊತ್ತಾಗುತ್ತೆ. ಕರ್ನಾಟಕ ಮಾತ್ರ ಅಲ್ಲ ತೆಲಂಗಾಣ, ತಮಿಳುನಾಡು ಸೇರಿದಂತೆ ಇಡೀ ದೇಶದಲ್ಲೂ ಬಿಜೆಪಿ ಪರ ಅಲೆ ಇದೆ ಎಂದು ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES