Sunday, April 28, 2024

ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

ಮಂಡ್ಯ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಚೆಕ್​ ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. 

ಹೌದು,ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಅಂದಾಜು 1 ಕೋಟಿ ನಗದು ಹಣ ಪತ್ತೆಯಾಗಿದ್ದು, ಚುನಾವಣಾ ಸಿಬ್ಬಂದಿ ಮತ್ತು ಮದ್ದೂರು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಡೆಗೆ ಕಾರು ಹೋಗುತ್ತಿತ್ತು. ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಪೊಲೀಸರು ಕೊಂಗಬೋರನದೊಡ್ಡಿ ಸೋಮವಾರ ಸಂಜೆ 7 ಗಂಟೆಯ ವೇಳೆ ಕಾರು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ 99 ಲಕ್ಷದ 20 ಸಾವಿರ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಣ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ.

ಚೀಲದಲ್ಲಿ ಹಣ ಪತ್ತೆ: ಗಿರೀಶ್ ಎಂಬವರ ಕಾರಿನಲ್ಲಿ ಈ ಹಣ ದೊರೆತಿದೆ. ಚೆಕ್ ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಕೆ.ಎಸ್.ಸೋಮಶೇಖರ್, ಮದ್ದೂರು ಪೋಲೀಸ್ ಠಾಣೆಯ ಇನ್ಸ್​ಪೆಕ್ಟರ್ ಕೆ.ಆರ್.ಪ್ರಸಾದ್, ಚುನಾವಣಾಧಿಕಾರಿ ಲೋಕನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಗಿರೀಶ್ ಎಂಬವರನ್ನು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು ಸೂಕ್ತ ಉತ್ತರ, ದಾಖಲೆ ನೀಡದ ಕಾರಣ ಹಣ ಸೀಜ್ ಮಾಡಿದ್ದಾರೆ. ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Related Articles

TRENDING ARTICLES