Friday, May 3, 2024

ಮಹಾ ಶಿವರಾತ್ರಿಯಂದು ಶಿವನ ಆರಾಧನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ.ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡಾ ಒಂದಾಗಿದೆ.

ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡುವುದು ಎಂಬುದರಿಂದ ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ಮಹಾ ಪರ್ವದಿದ ಎಂಬವರೆಗೆ ಹಲವು ಪೌರಾಣಿಕ ಕಥೆಗಳು ಮಹಾಶಿವರಾತ್ರಿಗೆ ತಳುಕು ಹಾಕಿಕೊಂಡಿವೆ.

ಮಹಾ ಶಿವರಾತ್ರಿ ಆಚರಣೆ ಹೇಗೆ?

ಮಹಾಶಿವರಾತ್ರಿಯನ್ನು ದೇವಾಲಯಗಳಲ್ಲಿ ಅಷ್ಟೇ ಅಲ್ಲದೇ ಮನೆಯಲ್ಲಿಯೂ ಸರಳವಾಗಿ ಆಚರಣೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಶಿವರಾತ್ರಿಯ ಆಚರಣೆಯನ್ನು 4 ಯಾಮ (ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಆಚರಣೆ)ಗಳಲ್ಲಿ ರುದ್ರಾಭಿಷೇಕ ನೆರವೇರಿಸುವ ಮೂಲಕ ಆಚರಣೆ ಮಾಡುವ ರೂಢಿ ಇದೆ.

ಮಹಾ ಶಿವರಾತ್ರಿಯ ದಿನದಂದು ಶಿವನನ್ನು ಆರಾಧಿಸುವವರು ದಿನವಿಡೀ ಉಪವಾಸ ಇರುತ್ತಾರೆ. ಇದು ಮಹಿಳೆಯರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಈ ದಿನದಂದು ಶಿವನ ಬಳಿಯಲ್ಲಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತೆಯರು ಭವಿಷ್ಯದಲ್ಲಿ ತಮಗೆ ಶಿವನಂತಾ ಪತಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.

ಮಹಾಶಿವರಾತ್ರಿಯ ಯಾಮ ಪೂಜೆ ಎಂದರೇನು?

ಯಾಮ ಎಂಬ ಶಬ್ದ ಕಾಲ ಸೂಚಕವಾಗಿದೆ. ಒಂದು ಯಾಮ ಎಂದರೆ ಮೂರು ತಾಸುಗಳ ಅವಧಿಯಾಗಿರುತ್ತದೆ. 12 ತಾಸುಗಳ ರಾತ್ರಿಯ ಅವಧಿಯನ್ನು 4 ಯಾಮಗಳನ್ನಾಗಿ ವಿಂಗಡಣೆ ಮಾಡಲಾಗಿದೆ.

ಸಾಮಾನ್ಯವಾಗಿ ಮೊದಲ ಶಿವರಾತ್ರಿಯ ದಿನದಂದು ಮೊದಲ ಯಾಮ ಪೂಜೆ ಸಂಜೆ 6 ಗಂಟೆಯಿಂದ ಆರಂಭಿಸಿ 9 ಗಂಟೆಯವರೆಗೂ ಆಚರಣೆ ಮಾಡಲಾಗುತ್ತದೆ. (ಮೊದಲ ಯಾಮ ಪೂಜೆ ಸೂರ್ಯಾಸ್ತದ ಮೇಲೆ ಅವಲಂಬನೆಯಾಗಿರುತ್ತದೆ) 2 ನೇ ಯಾಮ ಪೂಜೆ ರಾತ್ರಿ 9 ರಿಂದ 12 ವರೆಗೆ ನಡೆಯಲಿದೆ. 3 ನೇ ಯಾಮ ಪೂಜೆ ಮಧ್ಯ ರಾತ್ರಿ 12 ರಿಂದ 3 ಗಂಟೆವರೆಗೆ ನಡೆಯಲಿದ್ದು 4 ನೇ ಯಾಮ ಪೂಜೆ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ನಡೆಯಲಿದೆ.

ಯಾಮ ಪೂಜೆಯ ವಿಶೇಷತೆಗಳೇನು..?

ಏಕಾದಶ ರುದ್ರ ಪಠಣ ಇರುವ ಯಾಮ ಪೂಜೆಯಲ್ಲಿ ಮತ್ತೊಂದು ವಿಶೇಷವಿದೆ. ಅದೇನೆಂದರೆ ಮೊದಲನೆಯ ಯಾಮದಲ್ಲಿ ಹೇಳಿದ ಮಂತ್ರಗಳ ಎರಡರಷ್ಟನ್ನು 2 ನೇ ಯಾಮ ಪೂಜೆ ವೇಳೆ ಪಠಿಸಬೇಕು, ಎರಡನೆಯ ಯಾಮದ ಎರಡರಷ್ಟು ಮಂತ್ರಗಳನ್ನು ಮೂರನೆಯ ಯಾಮದಲ್ಲಿ ಪಠಿಸಲಾಗುತ್ತದೆ. ಮೂರನೆಯ ಯಾಮದ ಎರಡರಷ್ಟು ಮಂತ್ರಗಳನ್ನು ನಾಲ್ಕನೆಯ ಯಾಮದಲ್ಲಿ ಹೇಳುವುದು ರೂಢಿಯಲ್ಲಿದೆ.

ಸತತ ಹದಿನಾಲ್ಕು ವರ್ಷಗಳ ವರೆಗೆ ಈ ರೀತಿಯ ಶಿವರಾತ್ರಿ ವ್ರತವನ್ನು ಆಚರಿಸಿದರೆ ಉತ್ತಮ ಫಲ ಸಿಗಲಿದೆ ಎಂಬ ನಂಬಿಕೆ ಇದೆ.

ಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುವ ಶಿವ ಹಾಗೂ ಶಕ್ತಿಯು ಒಟ್ಟಾಗಿ ಸೇರಿದ ರಾತ್ರಿಯನ್ನು ಗೌರವಿಸುವುದು ಮಹಾ ಶಿವರಾತ್ರಿಯನ್ನು ಆರಾಧಿಸಲು ಇನ್ನೊಂದು ಕಾರಣ. ಮಹಾಶಿವರಾತ್ರಿಯನ್ನು ಆಚರಿಸಲು ಮತ್ತೊಂದು ಕಾರಣವೂ ಇದೆ. ಸಾಗರ ಮಂಥನದ ಸಂದರ್ಭದಲ್ಲಿ ಹೊರ ಹೊಮ್ಮಿದ್ದ ವಿಷವನ್ನು ಶಿವನು ಕುಡಿಯುತ್ತಾನೆ. ಈ ದಿನದ ಧ್ಯೋತಕವಾಗಿ ಕೂಡಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಶಿವ ಈ ರೀತಿ ಮಾಡಿದ್ದರಿಂದ ಜಗತ್ತು ಅಂಧಕಾರಕ್ಕೆ ಹೋಗುವುದು ತಪ್ಪಿತು. ಪಾರ್ವತಿಯು ವಿಷವು ಶಿವನ ದೇಹ ತಲುಪುವುದನ್ನು ತಪ್ಪಿಸಲು ಅವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾರಣಕ್ಕೆ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿತು.

RELATED ARTICLES

Related Articles

TRENDING ARTICLES