Saturday, April 27, 2024

ಮೋದಿ ಜಪ್ಪಯ್ಯಾ ಅಂದ್ರೂ ಒಂದು ರೂಪಾಯಿ ಕೊಟ್ಟಿಲ್ಲ : ಸಿದ್ದರಾಮಯ್ಯ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಜಪ್ಪಯ್ಯಾ ಅಂದ್ರೂ ನಮಗೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಕೃಷಿ ಮತ್ತು ಪೂರಕ ಚಟುವಟಿಕೆಗಳ ಸಂಬಂಧಿತ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ 18,171 ಕೋಟಿ ರೂಪಾಯಿ ನಷ್ಟ ಅಗಿದೆ ಎಂದು ವರದಿ ಕೊಟ್ಟಿದ್ದೇವೆ. ಐದು ತಿಂಗಳಾಗ್ತಾ ಬಂತೂ, ಇಂದಿನವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಮೋದಿಯವರ ಸರ್ಕಾರ ಒಂದು ಮೀಟಿಂಗ್ ಕೂಡ ಮಾಡಿಲ್ಲ. ಮೋದಿ ಮತ್ತು ಅಮಿತ್ ಶಾ ಅವರನ್ನು ನಾನೇ ಭೇಟಿ ಮಾಡಿದ್ರೂ, ಜಪ್ಪಯ್ಯಾ ಅಂದ್ರೂ ದುಡ್ಡು ಕೊಟ್ಟಿಲ್ಲ ಎಂದು ಕುಟುಕಿದರು.

ನಿಮಗೆ ಕೋಪ ಬರುತ್ತಾ? ಅಥವಾ ಇಲ್ವಾ?

ನಿಮಗೆ ಕೋಪ ಬರುತ್ತಾ? ಇಲ್ವಾ? ಅಂತ ರೈತರಿಗೆ ಪ್ರಶ್ನೆ ಮಾಡಿದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ರೈತರಿಗೆ ಸುಳ್ಳು ಹೇಳ್ತಾರೆ. ರೈತರಿಗೆ ಸ್ಪಂದಿಸುವ ಕೆಲಸ ಅವರು ಮಾಡುವುದಿಲ್ಲ. ಎರಡು ಲಕ್ಷ ಕೃಷಿ ಹೊಂಡ ನಾನು ತೋಡಿಸಿಕೊಟ್ಟಿದ್ದೆ. ಇವರು ಬಂದು ಅದನ್ನ ನಿಲ್ಲಿಸಿ ಬಿಟ್ಟರು. ಮತ್ತೆ ಈ ವರ್ಷ ಎರಡನೂರು ಕೋಟಿ ರೂಪಾಯಿ ಕೊಟ್ಟು ಕೃಷಿ ಭಾಗ್ಯ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.

ರಾಹುಲ್ ಗಾಂಧಿ ಈಗಾಗಲೇ ಘೋಷಿಸಿದ್ದಾರೆ

ಸಮಗ್ರ ಕೃಷಿ ಬೇಸಾಯವನ್ನು ರೈತರು ಮಾಡುವಂತಾಗಬೇಕು. ಅದಕ್ಕೆ ಸರ್ಕಾರ ಎಲ್ಲ ರೀತಿಯ ಬೆಂಬಲ ಸಹಕಾರ ಕೊಡುತ್ತದೆ. ರೈತರು ಈಗ ಚಳುವಳಿ ಮಾಡುತ್ತಿದ್ದಾರೆ. ಎಂಎಸ್‌ಪಿಯನ್ನು ಎಲ್ಲ ಬೆಳೆಗಳಿಗೆ ಕೊಡಬೇಕು, ಕಾನೂನು ಮಾಡಬೇಕು ಅಂತ ಬೇಡಿಕೆ ಮಾಡ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷದಿಂದ ನಾವು ಅಧಿಕಾರಕ್ಕೆ ಬಂದ್ರೆ ಕಾನೂನು ಮಾಡ್ತೀವಿ. ರಾಹುಲ್ ಗಾಂಧಿಯವರು ಈಗಾಗಲೇ ಘೋಷಣೆ ಮಾಡಿದ್ದಾರೆ. ರೈತರು ಹೆಚ್ಚು ಉತ್ಪಾದನೆ ಮಾಡಬೇಕು. ಇಲ್ಲವಾದರೆ ನಾವು ಆಹಾರಕ್ಕಾಗಿ ಬೇರೆ ದೇಶದ ಮೇಲೆ ಅವಲಂಭನೆ ಆಗುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

RELATED ARTICLES

Related Articles

TRENDING ARTICLES