Friday, May 3, 2024

ಬಿಜೆಪಿ ಸರ್ಕಾರ ಇದ್ದಾಗಲೂ ಸ್ಫೋಟ ಪ್ರಕರಣಗಳು ನಡೆದಿದ್ದವು : ಸಿದ್ದರಾಮಯ್ಯ

ಮೈಸೂರು : ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಮಂಗಳೂರು ಸ್ಫೋಟ ಸೇರಿದಂತೆ ಹಲವು ಪ್ರಕರಣಗಳು ಸಂಭವಿಸಿದ್ದವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಧ್ಯಹ್ನ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಈ ವಿಚಾರಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಪೋಲೀಸರು ಶಕ್ತರಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಗೃಹ ಸಚಿವರಿಗೆ ಸ್ಥಳಕ್ಕೆ ಹೋಗುವಂತೆ ಹೇಳಿದ್ದೇನೆ

ಓರ್ವ ವ್ಯಕ್ತಿ ಬ್ಯಾಗ್​ನಲ್ಲಿ ಈ ಸ್ಫೋಟಕ ತಂದಿಟ್ಟಿದ್ದಾನೆ. ಯಾರು? ಏನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ನನಗೆ ಪ್ರತಿ ಹಂತದ ಮಾಹಿತಿ ಕೊಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಗೃಹ ಸಚಿವರಿಗೂ ಸ್ಥಳಕ್ಕೆ ಹೋಗುವಂತೆ ಹೇಳಿದ್ದೇನೆ. ಸ್ಪೋಟದ ರುವಾರಿಗಳು ಯಾರು ಎಂದು ತಿಳಿದ ಮೇಲೆ ತನಿಖೆಯನ್ನು ಯಾವ ಹಂತದಲ್ಲಿ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ಗಾಯಾಳುಗಳಿಗೆ ಪರಿಹಾರ ಕೊಡುವ ಬಗ್ಗೆ ಚರ್ಚೆ

ಸದ್ಯಕ್ಕೆ ಘಟನೆಯ ಬಗ್ಗೆ ಮೇಲ್ನೋಟದ ಮಾಹಿತಿಗಳು ಮಾತ್ರ ಲಭ್ಯವಿದೆ. ಗಾಯಾಳುಗಳಿಗೆ ಪರಿಹಾರ ಕೊಡುವ ವಿಚಾರದಲ್ಲೂ ಪರಿಶೀಲನೆ ಮಾಡುತ್ತಿದ್ದೇವೆ‌. ಈಗ ನಾನು ಹೇಳುತ್ತಿರುವುದು ಆರಂಭಿಕ ಹಂತದ ಮಾಹಿತಿ. ಯಾರು ಮಾಡಿದರು? ಯಾಕೆ ಮಾಡಿದರು? ಎಂಬುದೆಲ್ಲಾ ಇನ್ನು ಸದ್ಯಕ್ಕೆ ವಿಚಾರಣೆಯ ಹಂತದಲ್ಲಿದೆ. ವ್ಯಕ್ತಿಯೊಬ್ಬ ಹೋಟೆಲ್ ಒಳಗೆ ಟೋಕನ್ ಪಡದು ಬ್ಯಾಗ್ ಇಟ್ಟಿದ್ದಾನೆ‌. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES