Thursday, May 2, 2024

ಸಿನಿಮಾ ನಿರ್ಮಾಪಕನಿಂದ 2 ಸಾವಿರ ಕೋಟಿ ರೂ. ಡ್ರಗ್ಸ್‌ ದಂಧೆ

ನವದೆಹಲಿ: ಮಾದಕವಸ್ತು ನಿಯಂತ್ರಣ ಬ್ಯೂರೋ ಹಾಗೂ ದೆಹಲಿ ಪೊಲೀಸರು ಬೃಹತ್‌ ಡ್ರಗ್ಸ್‌  ಜಾಲವೊಂದನ್ನು ಪತ್ತೆ ಹಂಚಿದ್ದಾರೆ. 

ಕಳೆದ ಮೂರು ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿ ಮೌಲ್ಯದ 3,500 ಕೆ.ಜಿ ಸ್ಯೂಡೋಫೆಡ್ರಿನ್‌ ಮಾದಕವಸ್ತುವನ್ನು ಅಕ್ರಮವಾಗಿ ಸಾಗಿಸಿದ ಜಾಲವೊಂದನ್ನು ಭೇದಿಸಿದ್ದು, ತಮಿಳು ಸಿನಿಮಾ ನಿರ್ಮಾಪಕನೇ ಈ ಜಾಲದ ರೂವಾರಿ ಎಂದು ಎನ್‌ಸಿಬಿ ಮಾಹಿತಿ ನೀಡಿದೆ.

ಹೌದ ಅಕ್ರಮವಾಗಿ ಮಾದಕವಸ್ತು ಸಾಗಣೆ ಜಾಲದ ಬಗ್ಗೆ ನಾಲ್ಕು ತಿಂಗಳ ಹಿಂದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ಅಧಿಕಾರಿಗಳು ಎನ್‌ಸಿಬಿಗೆ ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ಎನ್‌ಸಿಬಿ ಹಾಗೂ ದೆಹಲಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ, ತಮಿಳು ಸಿನಿಮಾ ನಿರ್ಮಾಪಕನೊಬ್ಬ ಡ್ರಗ್ಸ್‌ ಜಾಲದ ರೂವಾರಿಯಾಗಿದ್ದಾನೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು,ತಮಿಳು ನಿರ್ಮಾಪಕನ ಬಂಧನಕ್ಕೆ ಬಲೆ ಬೀಸಲಾಗಿದೆ.

ಎನ್‌ಸಿಬಿಯ ಜ್ಞಾನೇಶ್ವರ್‌ ಸಿಂಗ್‌ ಅವರು ಡ್ರಗ್ಸ್‌ ಜಾಲದ ಕುರಿತು ಮಾಹಿತಿ ನೀಡಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ದೆಹಲಿಯಿಂದ ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾಗೆ 2 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಕುರಿತು ನಿಖರ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ಆಹಾರ ಪದಾರ್ಥಗಳು ಹಾಗೂ ಒಣಗಿದ ಕೊಬ್ಬರಿ ಪುಡಿಯಲ್ಲಿ ಮಾದಕವಸ್ತುವನ್ನು ಮಿಶ್ರಣ ಮಾಡಿ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ ಸಾಗಣೆ ಮಾಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಇನ್ನೂ ಹತ್ತಾರು ಜನ ಭಾಗಿಯಾಗಿರುವ ಸಾಧ್ಯತೆ ಇರುವ ಕಾರಣ ಎನ್‌ಸಿಬಿ ಹಾಗೂ ದೆಹಲಿ ಪೊಲೀಸರ ತಂಡವೊಂದನ್ನು ರಚಿಸಲಾಗಿದೆ. ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾದಿಂದ ಡ್ರಗ್ಸ್‌ ಜಾಲದ ಕುರಿತು ಇನ್ನಷ್ಟು ಮಾಹಿತಿ ಪಡೆಯಲಾಗುತ್ತಿದೆ” ಎಂದು ಜ್ಞಾನೇಶ್ವರ್‌ ರಾವ್‌ ಅವರು ಮಾಹಿತಿ ನೀಡಿದ್ದಾರೆ.
ಮೂವರು ಬಂಧಿತ ಆರೋಪಿಗಳಿಂದ ಮೊಬೈಲ್‌ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Related Articles

TRENDING ARTICLES