Friday, May 10, 2024

ತ್ರಿವರ್ಣ ಧ್ವಜ ಕಸದ ತೊಟ್ಟಿಗೆ ಎಸೆದು ಅಪಮಾನ : ಶಾಲೆ ವಿರುದ್ಧ ಆಕ್ರೋಶ

ಚಿತ್ರದುರ್ಗ : ತ್ರಿವರ್ಣ ಧ್ವಜ ಕಂಡರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೈಮುಗಿದು ನಮಿಸುವ ಸಂಸ್ಕೃತಿ ನಮ್ಮದು. ಆದರೆ,(ರಾಷ್ಟ್ರಧ್ವಜ)ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಶಿಕ್ಷಣ ದೇಗುಲವೇ ಅಪಮಾನ ಮಾಡಿದ್ರೆ ಹೇಗೆ?

ಹೌದು, ಖಾಸಗಿ ಶಾಲೆಯೊಂದು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ. ಶಾಲೆಯ ನಡೆಗೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಳ್ಳಕೆರೆ ಪಟ್ಟಣದ ಚಿನ್ಮಯ್ ಶಾಲೆ ಮುಂಭಾಗದ ಕಸದ ತೊಟ್ಟಿ ಬಳಿ ಬಾವುಟಗಳು (ತ್ರಿವರ್ಣ ಧ್ವಜ)ಪತ್ತೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಶಾಲಾ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳು ನಮ್ಮ ದೇಶದ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಕೆಲವು ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಮಹತ್ವ ಅರಿಯದೆ ಕಸದ ತೊಟ್ಟಿಗೆ ಹಾಕಿರುವುದು ವಿಷಾಧನೀಯ ಸಂಗತಿ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ : ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಯಾತ್ರೆ

ಕೇಸರಿ, ಬಿಳಿ, ಹಸಿರು ಧ್ವಜವನ್ನು ದೇಶದ ಪ್ರತಿಯೊಬ್ಬ ಪ್ರಜೆ ಗೌರವಿಸುತ್ತಾರೆ. ಆದರೆ, ವಿಠಲ್ ನಗರದ ಚಿನ್ಮಯ್ ಶಾಲೆ ಎದುರಿನ ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜವನ್ನು ಹಾಕಿದ್ದಾರೆ. ಶಾಲೆಗೆ ಮಕ್ಕಳನ್ನು ಬಿಡಲು ಹೋದ ಪೋಷಕರು ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ ಸುರೇಶ್ ಅವರಿಗೆ ಕರೆ ಮಾಡಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸ್ಥಳೀಯರು ತಿಳಿಸಿದ್ದಾರೆ. ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವ ಇಂತಹ ಶಾಲೆ ಹಾಗೂ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES