Friday, May 10, 2024

ಗುಡ್ ನ್ಯೂಸ್ : ಆಸ್ಪತ್ರೆಯಿಂದ ಕುಮಾರಸ್ವಾಮಿ ಡಿಸ್ಚಾರ್ಜ್

ಬೆಂಗಳೂರು : ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.​ಡಿ ಕುಮಾರಸ್ವಾಮಿ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಕುಮಾರಸ್ವಾಮಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ವೈದ್ಯರ ಸಲಹೆಯಂತೆ ಕುಮಾರಸ್ವಾಮಿ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ ಒಂದೆರಡು ತಿಂಗಳಿನಿಂದ ಬಿಡುವಿಲ್ಲದೆ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಕೈಗೊಂಡಿದ್ದರು. ಚುನಾವಣಾ ದಿನಾಂಕ ಘೋಷಣೆ ಬಳಿಕ ಪ್ರಚಾರ ಕಾರ್ಯದಲ್ಲೂ ತೊಡಗಿದ್ದ ಕುಮಾರಸ್ವಾಮಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಕುಮಾರಸ್ವಾಮಿ ಅವರನ್ನು ಸ್ಪೆಷಲ್ ವಾರ್ಡ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ : ‘ನನ್ನನ್ನು ಬಲಿಪಶು ಮಾಡಿದ್ರು’ ಅಂತಾ ಹೇಳಲ್ಲ : ಸತ್ಯ ಬಿಚ್ಚಿಟ್ಟ ಎಚ್​ಡಿಡಿ

ಕಳೆದ ಶನಿವಾರ ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮಣಿಪಾಲ್​ ಆಸ್ಪತ್ರೆಯ ಡಾ. ಸತ್ಯನಾರಾಯಣ್ ಅವರು ಎಚ್​ಡಿ ಕುಮಾರಸ್ವಾಮಿಯವರಿಗೆ ಚಿಕಿತ್ಸೆ ನೀಡಿದ್ದರು. ಇನ್ನೂ ನಿನ್ನೆಯಷ್ಟೇ ಆದಿಚುಂಚನಗಿರಿ ಶ್ರೀಗಳು ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದರು.

ಆಸ್ಪತ್ರೆಯಲ್ಲೇ ಚುನಾವಣಾ ರಣತಂತ್ರ

ಅನಾರೋಗ್ಯದ ನಡುವೆಯೂ ಎಚ್.ಡಿ ಕುಮಾರಸ್ವಾಮಿ ಅವರು ಆಸ್ಪತ್ರೆಯಲ್ಲಿದ್ದುಕೊಂಡೇ ಚುನಾವಣೆಗೆ ಪ್ಲ್ಯಾನ್ ಮಾಡಿದ್ದರು. ಜೆಡಿಎಸ್​ ನಾಯಕರೊಂದಿಗೆ ರೋಡ್ ಮ್ಯಾಪ್ ಕುರಿತು ಚರ್ಚೆ ನಡೆಸಿದ್ದರು. ಏಪ್ರಿಲ್ 28ರವರೆಗೆ ದಿನಕ್ಕೆ 8ಕ್ಕೂ ಹೆಚ್ಚು ಕ್ಷೇತ್ರದ ಪ್ರಚಾರಕ್ಕೆ ಪ್ಲ್ಯಾನ್ ಮಾಡಿದ್ದರು. ಅದರಂತೆ, ಬೆಂಗಳೂರು-ಮೈಸೂರಿನಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.

RELATED ARTICLES

Related Articles

TRENDING ARTICLES