Tuesday, April 30, 2024

ಮಗನಿಂದ ಅಗ್ನಿಸ್ಪರ್ಶ.. ಪಂಚಭೂತಗಳಲ್ಲಿ ದ್ವಾರಕೀಶ್ ಲೀನ

ಫಿಲ್ಮಿ ಡೆಸ್ಕ್​ : ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಇನ್ನು ನೆನಪು ಮಾತ್ರ. ಬಾರದೂರಿಗೆ ಪಯಣ ಬೆಳೆಸಿರೋ ಅನನ್ಯ ಚೇತನಕ್ಕೆ ಪಿಎಂ, ಸಿಎಂಗಳಿಂದ ಹಿಡಿದು ಸೂಪರ್ ಸ್ಟಾರ್ ರಜನೀಕಾಂತ್​ವರೆಗೂ ಎಲ್ಲರೂ ಸಂತಾಪ ಸೂಚಿಸಿದ್ದಾರೆ. ಸುದೀಪ್, ದರ್ಶನ್, ಯಶ್ ಸಮೇತ ಇಡೀ ಚಿತ್ರರಂಗ ದ್ವಾರಕೀಶ್​ರ ಅಂತಿಮ ದರ್ಶನ ಪಡೆಯೋದ್ರ ಜೊತೆಗೆ ಅಗಣಿತ ಪ್ರತಿಭೆಯನ್ನ ಬೀಳ್ಕೊಟ್ಟರು. ಈ ಕುರಿತ ವರದಿ ಇಲ್ಲಿದೆ.

ಐದು ದಶಕ.. 50ಕ್ಕೂ ಅಧಿಕ ಸಿನಿಮಾಗಳ ನಿರ್ಮಾಣ, ಹತ್ತಾರು ಚಿತ್ರಗಳ ನಿರ್ದೇಶನ, ನೂರಾರು ಸಿನಿಮಾಗಳಲ್ಲಿ ನಟನೆ. ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದ ಹಿಡಿದು ಡಿಜಿಟಲ್​ವರೆಗೂ ಚಿತ್ರರಂಗದ ಎಲ್ಲಾ ಏಳುಬೀಳುಗಳ ಪಾಲುದಾರ. ಚಿತ್ರರಂಗಕ್ಕೆ ಹಲವು ಮೊದಲುಗಳನ್ನ ಕೊಟ್ಟ ಹರಿಕಾರ. ಹಿರಿಯರಿಂದ ಕಿರಿಯರವರೆಗೆ ಎಲ್ಲರಿಗೂ ಸ್ಫೂರ್ತಿ ಈ ಪ್ರಚಂಡ ಕುಳ್ಳ ದ್ವಾರಕೀಶ್.

2021ರ ಏಪ್ರಿಲ್ 16ಕ್ಕೆ ಇವರ ಪತ್ನಿ ಅಂಬುಜ ಇನ್ನಿಲ್ಲವಾಗಿದ್ರು. ಮೂರು ವರ್ಷಗಳ ಬಳಿಕ ಅದೇ ದಿನ, ಅಂದ್ರೆ ನಿನ್ನೆ ದ್ವಾರಕೀಶ್ ಇಹಲೋಕ ತ್ಯಜಿಸಿದರು. ಇಂದು ಬೆಳಗ್ಗೆ ಹುಸ್ಕೂರು ರಸ್ತೆಯಲ್ಲಿರೋ ಅವ್ರ ಸ್ಮೈಲ್ ಗ್ರೀನ್ಸ್ ವಿಲ್ಲಾದಿಂದ ಪಾರ್ಥಿವ ಶರೀರವನ್ನ ರವೀಂದ್ರ ಕಲಾಕ್ಷೇತ್ರಕ್ಕೆ ಸ್ಥಳಾಂತರಿಸಲಾಯಿತು. ಸಿಎಂ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಮುನಿರತ್ನ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಸಾಕಷ್ಟು ರಾಜಕೀಯ ಗಣ್ಯರು ಬಂದು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಇನ್ನು ನಿನ್ನೆ ದ್ವಾರಕೀಶ್ ನಿವಾಸದ ಬಳಿಯೇ ಬಂದು ಕುಟುಂಬಕ್ಕೆ ಧೈರ್ಯ ಹೇಳಿ ಹೋಗಿದ್ರು ನಟ ದರ್ಶನ್. ಇಂದು ನಟ ಸುದೀಪ್, ಯಶ್, ರಮೇಶ್ ಅರವಿಂದ್, ರವಿಚಂದ್ರನ್, ಶಿವರಾಜ್​ಕುಮಾರ್, ಜಗ್ಗೇಶ್, ಚರಣ್ ರಾಜ್, ಸುಧಾರಾಣಿ, ಮಾಳವಿಕಾ ಅವಿನಾಶ್, ಹಂಸಲೇಖ ಸೇರಿದಂತೆ ಇಡೀ ಚಿತ್ರರಂಗ ಬಂದು ಅಂತಿಮ ನಮನ ಸಲ್ಲಿಸಿತು.

ಇದನ್ನೂ ಓದಿ: ದ್ವಾರಕೀಶ್​ ಅಂತಿಮ ದರ್ಶನ ಪಡೆದ ಸಿಎಂ: ಸಕಲ ಸರ್ಕಾರಿ ಪೊಲೀಸ್​ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್, ತಮ್ಮ ಎರಡೂ ನಯನಗಳನ್ನು ಡಾ. ರಾಜ್​ಕುಮಾರ್ ನೇತ್ರದಾನ ಕೇಂದ್ರಕ್ಕೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿ ಆದರು. ಅವ್ರ ಕಣ್ಣುಗಳಿಂದ ಎಂಟರಿಂದ ಹತ್ತು ಮಂದಿಗೆ ದೃಷ್ಟಿ ಸಿಗಲಿದ್ದು, ಆ ಮೂಲಕ ದ್ವಾರಕೀಶ್ ಮತ್ತಷ್ಟು ವರ್ಷಗಳ ಕಾಲ ಜೀವಂತವಾಗಿರಲಿದ್ದಾರೆ.

ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು ದ್ವಾರಕೀಶ್ ಜೀ ಎಂದಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಸಹ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರೋದು ವಿಶೇಷ. ಇನ್ನು ಮಧ್ಯಾಹ್ನ 12.30ರ ವೇಳೆಗೆ ಚಾಮರಾಜಪೇಟೆಯ ಟಿಆರ್ ಮಿಲ್​​​ನಲ್ಲಿರೋ ಹಿಂದೂ ರುದ್ರಭೂಮಿಯಲ್ಲಿ ದ್ವಾರಕೀಶ್​​ರ ಐದೂ ಮಂದಿ ಮಕ್ಕಳಿಂದ ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನಗಳನ್ನ ನೆರವೇರಿಸಲಾಯಿತು. ಸರ್ಕಾರಿ ಪೊಲೀಸ್ ಗೌರವದೊಂದಿಗೆ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸೋ ಮೂಲಕ ಗೌರವ ನೀಡಲಾಯಿತು.

ಮೂವರು ಮಕ್ಕಳು ಕೇಶಮಂಡನೆ ಮಾಡಿದ ಬಳಿಕ ದ್ವಾರಕೀಶ್​ರ ಹಿರಿಮಗ ಸಂತೋಷ್​ರಿಂದ ಚಿತೆಗೆ ಅಗ್ನಿಸ್ಪರ್ಶ ನೀಡಲಾಯಿತು. ಮರಳಿ ಬಾರದೂರಿಗೆ ಪಯಣ ಬೆಳೆಸಿದ ದ್ವಾರಕೀಶ್, ಪಂಚಭೂತಗಳಲ್ಲಿ ಲೀನರಾದರು.

ಬ್ಯೂರೋ ರಿಪೋರ್ಟ್​, ಪವರ್ ಟಿವಿ 

RELATED ARTICLES

Related Articles

TRENDING ARTICLES