Tuesday, May 7, 2024

ಮಹಿಳೆಯರನ್ನು ಅವಮಾನಿಸಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವ ಭರದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಹಿಳೆಯರ ಕುರಿತಾಗಿ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ದುಃಖ ಆಗಿದ್ದರೆ ಈಗಲೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಇತ್ತೀಚೆಗೆ ನಾನು ತುಮಕೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನ ಪ್ರಸ್ತಾಪ ಮಾಡಿದ್ದೆ. ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳಲು ಆಗದ ರೀತಿ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ತರಾತುರಿಯಲ್ಲಿ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾಗಾಂಧಿ ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟು ಈಗಲೇ ದುಃಖಪಟ್ಟೆ ಅಂತ ಅಧ್ಯಕ್ಷರು, ಮಹಿಳೆಯರ ಪರ ಕಂಬನಿ ಮಿಡಿದಿದ್ದಾರೆ. ಡಿಕೆ ಶಿವಕುಮಾರ್‌ಗೆ ಕೇಳ್ತೀನಿ, ಕೆಲವು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ಇವರಿಗೆ ದುಃಖ ಬಂದಿಲ್ಲ ಪಾಪ. ಇದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಮೋದಿಯ ಪಿಕ್​ನಿಕ್​ ಫೋಟೋಗಳು ಬಿಟ್ಟರೆ ಬೇರೆ ಏನು ಇಲ್ಲ: ಸಚಿವ ಪ್ರಿಯಾಂಕ್​ ಖರ್ಗೆ

ಕಾಂಗ್ರೆಸ್‌ ನದ್ದು ಪಿಕ್‌ಪಾಕೆಟ್‌ ಗ್ಯಾರಂಟಿ:

ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ. ಕಾಂಗ್ರೆಸ್ ಸಚಿವರು, ನಾಯಕರು, ಮಹಿಳಾ ಘಟಕದವರು ಮಂಡ್ಯದಲ್ಲಿ `ಗೋ ಬ್ಯಾಕ್ ಕುಮಾರಸ್ವಾಮಿ’ ಅಂತ ಮಾಡಿದ್ದಾರೆ. ಅಲ್ಲಿಗೆ ಬಂದು ಹೆಣ್ಣುಮಕ್ಕಳನ್ನ ಕೇಳಿದ್ರೆ ಯಾಕೆ ಬಂದಿದ್ದೇವೆ ಗೊತ್ತಿಲ್ಲ ಅಂತ ಹೇಳ್ತಾರೆ. ಮಿಸ್ಟರ್ ಶಿವಕುಮಾರ್ ನಿಮ್ಮ ಉಸ್ತುವಾರಿ ಇದ್ದಾರೆ ಅಲ್ಲವಾ? ಆ ಮನುಷ್ಯ ಏನ್ ಹೇಳಿಕೊಟ್ರು? ಹೇಮಮಾಲಿನಿ ವಿರುದ್ಧ ಸುರ್ಜೇವಾಲಾ ಅವರು ಏನ್‌ ಹೇಳಿದ್ದರು? ಅದನ್ನ ಕನ್ನಡದಲ್ಲಿ ಓದೋಕೆ ಆಗಲ್ಲ. ಅದೆಲ್ಲ ಮಹಿಳೆಯರಿಗೆ ಗೌರವ ಕೊಡುವ ಹೇಳಿಕೆಗಳಾ? ಎಂದು ಪ್ರಶ್ನಿಸಿದ್ದಾರೆ.

ಸಾವಿರಾರು ಕೋಟಿ ಆಫರ್‌ ಬಂದಿತ್ತು: 

2 ಸಾವಿರ ಇವರು ಕೊಟ್ಟು ನಿಮ್ಮ ಯಜಮಾನರ ಜೇಬಿಂದ 5 ಸಾವಿರ ಕೀಳುತ್ತಿದ್ದಾರೆ. ಇದರಿಂದ ಎಚ್ಚರವಾಗಿರಿ ಅಂತ ನಾನು ಹೇಳಿದ್ದೇನೆ. ಆರ್ಥಿಕ ಶಕ್ತಿ ಬರಬೇಕು ಅಂತ ಭಾಷಣ ಮಾಡಿದ್ದೇನೆ. 2006-07 ಸಾರಾಯಿ ನಿಷೇಧ ಮಾಡಿದ್ದು ನಾನು, ಆವತ್ತು ನನಗೆ ಸಾವಿರಾರು ಕೋಟಿ ರೂ. ಆಫರ್ ಮಾಡಿದ್ದರು. ಆದ್ರೆ ನಾನು ಮಹಿಳೆಯರಿಗಾಗಿ ಆ ಕೆಲಸ ಮಾಡಿದೆ. ಕಾಂಗ್ರೆಸ್ ಅವರಿಗೆ ನನ್ನ ಬಗ್ಗೆ ಮಾತಾಡೋಕೆ ವಿಷಯ ಇಲ್ಲ. ಅದಕ್ಕೆ ನನ್ನ ಮೇಲೆ ಮಾತಾಡ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

ರೇಟ್‌ ಫಿಕ್ಸ್‌ ಮಾಡಿದ್ದು ಕಾಂಗ್ರೆಸ್‌: 

ಕಂಗನಾ ರಣಾವತ್ ಬಗ್ಗೆ ಏನ್ ಮಾತಾಡಿದ್ರಿ? ಕಾಂಗ್ರೆಸ್‌ನವರೇ ರೇಟ್ ಫಿಕ್ಸ್ ಮಾಡಿದ್ರು. ಅಷ್ಟೇ ಅಲ್ಲ, ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನ್ ಹೇಳಿದ್ರು ಮರೆತಿದ್ದೀರಾ? ಮದ್ದೂರಿನಲ್ಲಿ ನನ್ನ ಮಾಜಿ ಶಾಸಕರ ಬಗ್ಗೆ ಮಾತಾಡಿದ್ರು, ಶಾಮನೂರು ಶಿವಶಂಕರಪ್ಪ, ಮಹಿಳೆಯರು ಅಡುಗೆ ಮನೆಯಲ್ಲಿ ಇರೋಕೆ ಲಾಯಕ್ಕು ಅಂತಾರೆ. ಅದಕ್ಕೆ ನೀವೆ ಕ್ಷಮೆ ಕೇಳಿದ್ರಿ, ಶಿವಕುಮಾರ್ ಉತ್ತರ ಕೊಡಪ್ಪ, ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನ್ ಹೇಳ್ತಾರೆ? ಅಂತ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES