Saturday, April 27, 2024

ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನರಾರಂಭಕ್ಕೆ ಉತ್ಸುಕರಾಗಿದ್ದೇವೆ: ಪಾಕ್​ ಸಚಿವ

ನವದೆಹಲಿ: ಪಾಕಿಸ್ತಾನದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದೊಂದಿಗೆ ವ್ಯಾಪಾರ  ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ತೀರ್ಮಾನಿಸಿದೆ. ಈ ವಿಚಾರವನ್ನು ಪಾಕಿಸ್ತಾನ ‘ಗಂಭೀರವಾಗಿ’ ಪರಿಗಣಿಸುತ್ತಿದೆ ಎಂದು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಹೇಳಿದ್ದಾರೆ.

ಬ್ರಸೆಲ್ಸ್‌ನಲ್ಲಿ ನಡೆದ ಪರಮಾಣು ಶಕ್ತಿ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಲಂಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗದು ಕೊರತೆಯನ್ನು ಎದುರಿಸುತ್ತಿರುವ ತಮ್ಮ ದೇಶದ ವ್ಯಾಪಾರ ಸಮುದಾಯವು ಭಾರತದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಲು ಉತ್ಸುಕವಾಗಿದೆ. ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರವನ್ನು ಪುನರಾರಂಭಿಸಲು ಬಯಸುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ: ಸುಳಿವು ಬಿಟ್ಟಕೊಟ್ಟ ನಿಖಿಲ್!

ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು. ಭಾರತದ ಈ ನಡೆಯನ್ನು ವಿರೋಧಿಸಿದ್ದ ಪಾಕಿಸ್ತಾನವು ಭಾರತದೊಂದಿಗೆ ತನ್ನ ರಾಜತಾಂತ್ರಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿತ್ತು.

ಆದರೆ, ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದು ಪಾಕಿಸ್ತಾನ ನಿರಂತರವಾಗಿ ಹೇಳುತ್ತಿದೆ. ಭಾರತದೊಂದಿಗೆ ಮಾತುಕತೆ ಆರಂಭಿಸಲು ಪೂರ್ವ ಷರತ್ತಾಗಿ ಕಾಶ್ಮೀರದಲ್ಲಿ ತನ್ನ ‘ಏಕಪಕ್ಷೀಯ’ ಕ್ರಮಗಳನ್ನು ಭಾರತ ಹಿಂಪಡೆಯಬೇಕು ಎಂದು ಪಾಕಿಸ್ತಾನ ಹೇಳಿದೆ. ಆದಾಗ್ಯೂ, ಭಾರತವು ಈ ಸಲಹೆಯನ್ನು ತಿರಸ್ಕರಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ.

RELATED ARTICLES

Related Articles

TRENDING ARTICLES