Sunday, April 28, 2024

ನಾವು 8 ಕ್ಷೇತ್ರ ಕೇಳ್ತಿಲ್ಲ, ಕೇವಲ 3 ಮಾತ್ರ ಕೇಳ್ತಿದ್ದೀವಿ : ನಿಖಿಲ್ ಕುಮಾರಸ್ವಾಮಿ

ರಾಮನಗರ : ನಾವು 7ರಿಂದ 8 ಕ್ಷೇತ್ರ ಕೇಳ್ತಿಲ್ಲ. ನಾವು ಕೇವಲ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಕೇಳ್ತಿದ್ದೀವಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿಯೇ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

ನಾವು ಹೆಚ್ಚಿಗೆ ಸ್ಥಾನ ಕೇಳಿಲ್ಲ. ಕಾರಣ ನರೇಂದ್ರ ಮೋದಿಯವರನ್ನ ಗೆಲ್ಲಿಸಿ,‌ ಮತ್ತೊಮ್ಮೆ ದೇಶದ ಪ್ರಧಾನಿ ಮಾಡುವ ಉದ್ದೇಶ. ಹಾಗಾಗಿ, ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು. ಕೋಲಾರದಲ್ಲಿ ಹೆಚ್ಚಿನ ಮತಗಳು ಜೆಡಿಎಸ್ ಪರವಾಗಿದೆ. ಹಾಗಾಗಿ, ಕೋಲಾರವೂ ನಮಗೆ ಬೇಕು ಎಂದು ಕಾರ್ಯಕರ್ತರ ಒತ್ತಡ ಇದೆ ಎಂದರು.

ಮೂರು ಕ್ಷೇತ್ರಗಳಲ್ಲಿ ನಾವು ಟಿಕೆಟ್ ಕೇಳ್ತಿದ್ದೇವೆ

ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳಲ್ಲಿ ಮಾತ್ರ ನಾವು ಟಿಕೆಟ್ ಕೇಳ್ತಿದ್ದೇವೆ. ಈ ಬಗ್ಗೆ ನಮ್ಮ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ತಿಳಿಸುವ ಕೆಲಸ ಆಗುತ್ತೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸುಮಾರು 27ಲಕ್ಷ ಮತದಾರರನ್ನ ಹೊಂದಿರುವ ಕ್ಷೇತ್ರ. ಇಲ್ಲಿ‌ ಡಾ. ಮಂಜುನಾಥ್ ಮೈತ್ರಿ ಅಭ್ಯರ್ಥಿ ಆಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಚುನಾವಣಾ ಕಾರ್ಯ ಆರಂಭಿಸಿದ್ದಾರೆ ಎಂದು ಹೇಳಿದರು.

ರಾಮನಗರದಲ್ಲಿ ಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ

ಡಾ.ಮಂಜುನಾಥ್ ಅವರ ವೈದ್ಯಕೀಯ ಸೇವೆ ಹೆಸರುವಾಸಿಯಾಗಿದೆ. ಹಾಗಾಗಿ ಅವರನ್ನು ಈ ಚುನಾವಣೆಯಲ್ಲಿ ನಿಲ್ಲಿಸಬೇಕು ಅಂತ ಬಿಜೆಪಿ ವರಿಷ್ಠರು ಮನವಿ ಮಾಡಿದ್ರು. ಹಾಗಾಗಿ, ಡಾ.ಮಂಜುನಾಥ್ ಅವರು ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ರಾಮನಗರದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಗೆಲ್ಲಿಸಬೇಕು. ಅವರು ಪಕ್ಷಾತೀತವಾದ ಒಬ್ಬ ವ್ಯಕ್ತಿ. ಅವರ ಗೆಲುವಿಗೆ ಎಲ್ಲರೂ ಕೆಲಸ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

RELATED ARTICLES

Related Articles

TRENDING ARTICLES