Tuesday, May 21, 2024

ಬಜರಂಗಬಲಿ ಕೀ ಜೈ, ಆಂಜನೇಯ ಸ್ವಾಮಿಗೆ ಜೈ : ಭಾಷಣ ಆರಂಭದಲ್ಲೇ ‘ಕೈ’ ವಿರುದ್ಧ ಮೋದಿ ಕಿಡಿ

ಬಳ್ಳಾರಿ : ಬಳ್ಳಾರಿ ಜಿಲ್ಲೆ ಹೊರವಲಯದ ಸತ್ಯಂ ಕಾಲೇಜು ಬಳಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಬಜರಂಗಬಲಿ ಕೀ ಜೈ, ಆಂಜನೇಯ ಸ್ವಾಮಿಗೆ ಜೈ. ಬಳ್ಳಾರಿಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕನಕದುರ್ಗಮ್ಮ ಮತ್ತು ಕುಮಾರಸ್ವಾಮಿ ದೇವರಿಗೆ ನನ್ನ ಪ್ರಣಾಮಗಳು. ಹುಲಿಕುಂಟೆರಾಯ ಹನುಮಂತ ಸ್ವಾಮಿಗೂ ನನ್ನ ಪ್ರಣಾಮಗಳು ಎನ್ನುತ್ತಲೇ ಬಜರಂಗದಳ ಬ್ಯಾನ್ ಎಂದ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಬಿಜೆಪಿಗೆ ಆರ್ಶಿವಾದ ಮಾಡಲು ನೀವು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದೀರಾ. ನಿನ್ನೆ ರಾತ್ರಿ ಮಳೆ ಬಂದರೂ ಅಪಾರ ಸಂಖ್ಯೆಯಲ್ಲಿ ಎಲ್ಲರೂ ಬಂದಿದ್ದೀರಾ. ಇದೇ ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ. ನಿಮ್ಮಗೆ ನನ್ನ ನಮಸ್ಕಾರಗಳು ಎಂದರು.

ಕಾಂಗ್ರೆಸ್ಸಿನ ಬುಡ ಅಲ್ಲಾಡುತ್ತಿದೆ

ಸ್ವಾತಂತ್ರ್ಯಾನಂತರ ದೇಶದ ರಾಜಕಾರಣವನ್ನು ಕಾಂಗ್ರೆಸ್‌ ಭ್ರಷ್ಟಗೊಳಿಸಿದೆ. ಚುನಾವಣೆ ಗೆಲ್ಲುವುದಕ್ಕೆ ಸುಳ್ಳು ನರೆಟಿವ್‌ ಸೃಷ್ಟಿ ಮಾಡುತ್ತಿದೆ, ಸುಳ್ಳು ಸರ್ವೇಗಳನ್ನು ಹರಡುತ್ತದೆ. ಆದರೆ, ಜನರು ಬಿಜೆಪಿಯನ್ನು ಗೆಲ್ಲಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ. ನಮಗೆ ಸಿಗುತ್ತಿರುವ ಜನಬೆಂಬಲವನ್ನು ಕಂಡು ಕಾಂಗ್ರೆಸ್ಸಿನ ಬುಡ ಅಲ್ಲಾಡುತ್ತಿದೆ. ನಾನು ಜೈ ಬಜರಂಗಬಲಿ ಎಂದು ಹೇಳಿದರೂ ಕಾಂಗ್ರೆಸ್ ಹೆದರುತ್ತಿದೆ ಎಂದು ಪ್ರಧಾನಿ ಮೋದಿ ಅಬ್ಬರಿಸಿದರು.

ಇದನ್ನೂ ಓದಿ : ಮೋದಿ ‘ಸೂಟು-ಬೂಟು, ಎಸಿ ಕೋಣೆ’ ವಾಸ್ತವ್ಯದ ಪ್ರಧಾನಿಯಲ್ಲ : ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಸುಳ್ಳು ಸರ್ವೆ ಮಾಡಿಸಿದೆ

ಕರ್ನಾಟಕದಲ್ಲೂ ಕಾಂಗ್ರೆಸ್ ಸುಳ್ಳು ಸರ್ವೆ ಮಾಡಿಸಿದೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿ ದೇಶದ ಜನರನ್ನು ಮೋಸ ಮಾಡಿದೆ. ಸುಳ್ಳು ಸರ್ವೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸಿದೆ. ಹಣ ಬಲದ ಜೊತೆಗೆ ಸುಳ್ಳು ಸರ್ವೆ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಸುಳ್ಳು ಮೂಟೆಯ ಪ್ರಣಾಳಿಕೆ

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದಕರ ಮುಂದೆ ಕಾಂಗ್ರೆಸ್ ಮಂಡಿಯೂರಿ ಕುಳಿತಿದೆ. ಒಂದೇ ಒಂದು ಶಬ್ದವನ್ನೂ ಭಯೋತ್ಪಾದಕರ ವಿರುದ್ಧ ಮಾತನಾಡುತ್ತಿಲ್ಲ. ಉಗ್ರವಾದ ಪಾಲಿಸುವವರು ಮತ್ತು ಉಗ್ರವಾದವನ್ನು ಬೆಂಬಲಿಸುವವರ ಜೊತೆ ಕಾಂಗ್ರೆಸ್ ಹಿಂಬಾಗಿಲ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್​ ಸುಳ್ಳು ಮೂಟೆಯ ಪ್ರಣಾಳಿಕೆಯನ್ನು ಹೊರಡಿಸಿದೆ. ಪ್ರಣಾಳಿಕೆಯಲ್ಲಿ ಬಜರಂಗಳ ನಿಷೇಧ ಮಾಡುವುದಾಗಿ ಘೋಷಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು

RELATED ARTICLES

Related Articles

TRENDING ARTICLES