Sunday, June 23, 2024

ಕೆಲಸ ಕೊಡಿಸುವುದಾಗಿ ಹೇಳಿ ಮಹಾರಾಷ್ಟ್ರದಲ್ಲಿ ಮಹಿಳೆಯ ಮಾರಾಟ!: ದೂರು ದಾಖಲು

ದಾವಣಗೆರೆ: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಘಟನೆ ಸಂಬಂಧ ದಾವಣಗೆರೆಯ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ದ ಎಫ್​ಐಆರ್​ ದಾಖಲಾಗಿದೆ.

ಭದ್ರಾವತಿ ಮೂಲದ ರೋಜಿ ‌ಲೀನಾ(43), ಮಲ್ಲಿಕಾರ್ಜುನ (47) ಹಾಗೂ ಲೋಕೇಶ (35) ವಿರುದ್ಧ ಪ್ರಕರಣ ದಾಖಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗ್ರಾಮದಲ್ಲಿ ಸುಮಾರು 30 ವರ್ಷ ವಯೋಮಾನದ ಮಹಿಳೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಮಹಿಳೆಯ ಸಹೋದರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ಟಿಸಿ ನೀಡದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಘಟನೆಯ ಹಿನ್ನೆಲೆ:

ಮಹಿಳೆಗೆ ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿತ್ತು, ಪತಿಯ ನಿಧನಾ ನಂತರ  ಕಲ್ಯಾಣ ಮಂಟಪಗಳಲ್ಲಿ‌ ಕೆಲಸಕ್ಕೆ ‌ಹೋಗುತ್ತಿದ್ದರು. ಮೇ 12 ರಂದು ಶಿವಮೊಗ್ಗಕ್ಕೆ ಹೋಗುವುದಾಗಿ ಹೇಳಿ ಹೋದವರು ವಾಪಸ್ಸಾಗಿರಲಿಲ್ಲ. ಬಳಿಕ ಬೇರೊಬ್ಬರ ಮೊಬೈಲ್​ನಿಂದ ಸಹೋದರನಿಗೆ ಕರೆ ಮಾಡಿದ ಮಹಿಳೆ ತನ್ನನ್ನು ಸೊಲ್ಲಾಪುರದ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಒಂದು ಲಕ್ಷ ರೂಪಾಯಿ ಕೊಟ್ಟರೇ ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮಾಹಿತಿ ಆಧಾರದ ಮೇಲೆ ಮಹಿಳೆಯ ಸಹೋದರ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ಸಹೋದರಿಯನ್ನು ರಕ್ಷಣೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ದೂರಿನ ಅನ್ವಯ ಪೊಲೀಸರು ಮೂವರ ವಿರುದ್ದ ಎಫ್​ಐಆರ್​ ದಾಖಲಿಸಿ ವಿಚಾರಣೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES