Saturday, April 27, 2024

ಮೋದಿ ‘ಸೂಟು-ಬೂಟು, ಎಸಿ ಕೋಣೆ’ ವಾಸ್ತವ್ಯದ ಪ್ರಧಾನಿಯಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿನಾ? ಅಥವಾ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿನಾ? ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ, ನಮ್ಮ ಪ್ರಧಾನಿ ಹಿಂದಿನ ಪ್ರಧಾನಿಯಂತೆ ಸೂಟು-ಬೂಟು, ಎಸಿ ಕೋಣೆ ದೆಹಲಿ ವಾಸ್ತವ್ಯದ ಪ್ರಧಾನ ಮಂತ್ರಿಯಲ್ಲ. ಹಳ್ಳಿ ಹಳ್ಳಿಗಳಿಗೂ ಹೋಗುತ್ತಿರುವ ಪ್ರಧಾನಿಯವರು ಜನರ ಭಾವನೆಗಳನ್ನು ಅರಿಯುವ ಕೆಲಸ ಮಾಡುತ್ತಿದ್ದು, ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ ಎಂದು ಛೇಡಿಸಿದ್ದಾರೆ.

ಆಗ ಮನಮೋಹನ್​ ಸಿಂಗ್ ಬಂದಿದ್ರಾ?

ನಮ್ಮ ಪ್ರಧಾನಿ ಕಾಂಗ್ರೆಸ್​​ನ ಪ್ರಧಾನಿ ರೀತಿ ಇರಬೇಕು ಅಂತೇನಿಲ್ಲ. ಹಳ್ಳಿಗೆ ಹೋದರೇ ಪ್ರಧಾನಿ ಅಲ್ಲ ಅನ್ನೋದು ಕಾಂಗ್ರೆಸ್​ ವಿಚಾರಧಾರೆ. ಸಿದ್ದರಾಮಯ್ಯ ಸಹ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಪರಿಹಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಆತ್ಮಹತ್ಯೆಗಳಾಗಿತ್ತು. ಆಗ ಮನಮೋಹನ್​ ಸಿಂಗ್​, ರಾಹುಲ್ ಗಾಂಧಿ ಬಂದಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ‘ಹಿಂದೂ ಹೆಣ್ಮಕ್ಕಳ ಹಣೆಯ ಕುಂಕುಮ’ ಅಳಿಸೋದಕ್ಕೂ ಹೇಸಲ್ಲ : ಆರ್.ಅಶೋಕ್

ಎಸ್​ಡಿಪಿಐಪಿಎಫ್ಐ ಮೆಚ್ಚಿಸುವ ಯತ್ನ

ಬಜರಂಗದಳ ಬ್ಯಾನ್​ ಮಾಡುತ್ತೇವೆಂದು ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾವನೆ ಮಾಡಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ನವರು ಎಸ್​ಡಿಪಿಐ-ಪಿಎಫ್ಐ ಮೆಚ್ಚಿಸಲು ಏನೇನೋ ಯತ್ನಕ್ಕೆ ಮುಂದಾಗಿದ್ದಾರೆ. ಅವರನ್ನು ಸಂತೋಷ ಪಡಿಸಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎಂಇಎಸ್ ಪುಂಡಾಟಿಕೆ ಹೊಸದೇನಲ್ಲ

ಕಾಂಗ್ರೆಸ್ಸಿಗರು​ ಎಲ್ಲಿಯವರೆಗೆ ಎಸ್​ಡಿಪಿಐ-ಪಿಎಫ್ಐ ಸಂತೋಷ ಪಡಿಸುತ್ತಾರೋ, ಅಲ್ಲಿಯವರೆಗೆ ಬಜರಂಗದಳದ ವಿಚಾರ ಜನರ ಮಧ್ಯೆ ಇರುತ್ತದೆ. ಎಂಇಎಸ್ ಪುಂಡಾಟಿಕೆ ಇದು ಹೊಸದೇನಲ್ಲ, ಅವರ ಒಟ್ಟು ಚಟುವಟಿಕೆಗಳೇ ಕಪ್ಪಾಗಿದ್ದು ಜನರ ಭಾವನೆಗಳನ್ನು ಕೆರಳಿಸುವ ಕಾರ್ಯವನ್ನು ಸದಾ ಅವರು ಮಾಡುತ್ತಾ ಬಂದಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಕಂಡು ಬಿಜೆಪಿ ಅವರಿಗೆ ಹೆದರಿಕೆ ಆಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಇದೊಂದು ಹಾಸ್ಯಾಸ್ಪದ ವಿಷಯ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES