Thursday, May 9, 2024

ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ರಾಜೀನಾಮೆ: ರೇಣುಕಾಚಾರ್ಯ

ಬೆಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಟ್ವೀಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವೀಣ್​​ ಹತ್ಯೆ ವಿಚಾರ ಕುರಿತು ಟ್ವಿಟ್​​ ಮಾಡಿದ ಅವರು, ರಾಜ್ಯದಲ್ಲಿ ಪದೇ ಪದೇ ಹಿಂದೂ ಕಾರ್ಯಕರ್ತರ ಹತ್ಯೆಗಳು ನೆಡೆಯುತ್ತಿದ್ದು, ರಾಜ್ಯದ ಉದ್ದಗಲಕ್ಕೆ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದು ನಮ್ಮ ಸರ್ಕಾರ ಶ್ರೀ ಯೋಗಿ ಆದಿತ್ಯನಾಥ್ ಜಿ ಅವರ ಸರ್ಕಾರದ ಮಾದರಿಯಲ್ಲಿ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಣ್ಯ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ನಮ್ಮ ಸರ್ಕಾರ ಹಾಗೂ ಸಂಘಟನೆಗೆ ವರ್ಚಸ್ಸು ಉಳಿಯಲು ಸಾಧ್ಯ ಎಂದರು.

ನಮ್ಮ ಹಿಂದೂ ಕಾರ್ಯಕರ್ತರನ್ನು ರಕ್ಷಿಸಲು ನಮ್ಮಿಂದ ಸಾಧ್ಯವಾಗದಿದ್ದರೆ ನಾವು ಅಧಿಕಾರದಲ್ಲಿದ್ದೂ ಏನು ಪ್ರಯೋಜನ? ಪ್ರತಿ ಬಾರಿ ಹಿಂದೂ ಕಾರ್ಯಕರ್ತರುಗಳ ಹತ್ಯೆಯಾದಾಗ ಭಾವಪೂರ್ಣ ಶ್ರದ್ಧಾಂಜಲಿ, ಕಠಿಣ ಕ್ರಮಕ್ಕೆ ಒತ್ತಾಯ, ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು, ಓಂ ಶಾಂತಿ ಎನ್ನುವ ನಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಂದ ಏನೂ ಪ್ರಯೋಜನವಿಲ್ಲ. ನಮ್ಮ ಸರ್ಕಾರ ಹಿಂದೂ ಕಾರ್ಯಕರ್ತರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ ದುಷ್ಕರ್ಮಿಗಳನ್ನು ನಡು ರಸ್ತೆಯಲ್ಲಿಯೇ ಎನ್ಕೌಂಟರ್ ಮಾಡಬೇಕು ಎಂದು ಕಿಡಿಕಾಡಿದರು.

ಅಲ್ಲದೇ ನನಗೆ ವೈಯಕ್ತಿಕವಾಗಿ ಅಧಿಕಾರಕ್ಕಿಂತ ನಮ್ಮ ಹಿಂದೂ ಕಾರ್ಯಕರ್ತರ ರಕ್ಷಣೆಯೇ ಮುಖ್ಯ, ಆದ್ದರಿಂದ ನಮ್ಮ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ನನ್ನ ಮತ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದೇನೆ ಎಂದು ತಿಳಿಸಿದರು.

ಇನ್ನು ಕೆಲ ದಿನಗಳ ಹಿಂದೆ ನನಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನೂ ಸಹ ನಮ್ಮ ಪೊಲೀಸ್ ಇಲಾಖೆ ಇದುವರೆಗೂ ಪತ್ತೆ ಹಚ್ಚಿಲ್ಲ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಮುಜುಗರವಾಗುತ್ತದೆ. ಜನತೆಗೆ ಬೇಕಾಗಿರುವುದು ನಮ್ಮ ಪೌರುಷದ ಭಾಷಣ ಅಥವಾ ಹೇಳಿಕೆಗಳಲ್ಲ, ನಾವು ತೆಗೆದುಕೊಳ್ಳುವ ನಿರ್ಧಾಕ್ಷಣ್ಯ ಕ್ರಮಗಳು ಎಂದು ತಮ್ಮದೇ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಹಿಂದೂ ಸಮೂಹ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನ ಉಳಿಸಿಕೊಳ್ಳಲು ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಣ್ಯ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ನಾನು ಈ ಸರ್ಕಾರದಲ್ಲಿ ಮುಂದುವರೆಯುತ್ತೇನೆ, ಇಲ್ಲವಾದರೆ ರಾಜೀನಾಮೆ ನೀಡುತ್ತೇನೆ ಎನ್ನುವುದನ್ನು ಮತ್ತೊಮ್ಮೆ ಹೇಳುತ್ತೇನೆ.

RELATED ARTICLES

Related Articles

TRENDING ARTICLES