ನವದೆಹಲಿ : ಸ್ಯಾಮ್ ಪಿತ್ರೋಡಾ ಅವರು ಸ್ವಇಚ್ಛೆಯಿಂದ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ನ (ಭಾರತೀಯ ಸಾಗರೋತ್ತರ ಕಾಂಗ್ರೆಸ್) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಸ್ಯಾಮ್ ಪಿತ್ರೋಡಾ ಅವರ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂಗೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ವೈವಿಧ್ಯತೆಯನ್ನು ವಿವರಿಸುವಾಗ, ಭಾರತದ ಪೂರ್ವದ ಜನರು ಚೀನಾದವರಂತೆ, ಪಶ್ಚಿಮದವರು ಅರಬ್ನವರಂತೆ, ಉತ್ತರ ಭಾರತದ ಜನರು ಬಿಳಿಯರಂತೆ ಮತ್ತು ದಕ್ಷಿಣ ಭಾರತೀಯರು ಆಫ್ರಿಕದವರಂತೆ ಕಾಣುತ್ತಾರೆ. ಭಾರತದಂಥಾ ವೈವಿಧ್ಯಮ ದೇಶದಲ್ಲಿ ಮಾತ್ರ ಹೀಗೆ ಎಲ್ಲರನ್ನೂ ಒಟ್ಟಾಗಿ ಕಾಣಲು ಸಾಧ್ಯ ಎಂದು ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ ಹೇಳಿದ್ದರು.
ಭಾರತೀಯರ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ್ದು ವಿವಾದಕ್ಕೀಡಾಗಿದೆ. ಪ್ರಧಾನಿ ಮೋದಿ ಪಿತ್ರೋಡಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.
ವಿವಾದದ ಬಳಿಕ ಸ್ಯಾಮ್ ಪಿತ್ರೋಡಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇತ್ತ, ಸ್ಯಾಮ್ ಪಿತ್ರೋಡಾ ಅವರು ಸ್ವಂತ ಇಚ್ಛೆಯಿಂದಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.