Wednesday, May 22, 2024

ಸಂಕ್ರಾಂತಿ ನಂತರ ಸರ್ಕಾರಕ್ಕೆ ಮೇಜರ್ ಸರ್ಜರಿ…?

ಬದಲಾವಣೆ ಜಗದ ನಿಯಮ. ಬದಲಾವಣೆಗೆ ಹೊಂದಿಕೊಂಡು ಹೋದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಇದೊಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹೇಳಿಕೆ ನೀಡಿದರು ಬೇರೆ ಯಾರು ಅಲ್ಲ. ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ. ಹೌದು, ಮುಖ್ಯಮಂತ್ರಿ ಬೊಮ್ಮಾಯಿಯವರ ಈ ಹತಾಶೆಯ ಹೇಳಿಕೆಯನ್ನು ನೋಡಿದರೆ, ಸದ್ಯದಲ್ಲೇ ಸಿಎಂ ಬದಲಾಗ್ತಾರಾ ಎಂಬ ಚರ್ಚೆ ಶುರುವಾಗಿದೆ.

ಸಂಕ್ರಾಂತಿ ನಂತರ ರಾಜ್ಯ ಸರ್ಕಾರಕ್ಕೆ ಮೇಜರ್ ಸರ್ಜರಿ ಆಗುತ್ತೆ ಎಂಬ ಚರ್ಚೆ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಬಹಳವಾಗಿ ಕೇಳಿ ಬರುತ್ತಿದೆ. ಸದ್ಯ, ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಕೊಟ್ಟಿರುವ ಹೇಳಿಕೆ ಸಿಎಂ ಬದಲಾವಣೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಮೊನ್ನೆ ಸಿಎಂ ತವರು ಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಅಧಿಕಾರ ಶಾಶ್ವತ ಅಲ್ಲ ಅಧಿಕಾರ ಬರುತ್ತೆ ಹೋಗುತ್ತೆ ನೀವು ಮುಖ್ಯ ನಂಗೆ ಎಂದು ಕ್ಷೇತ್ರದ ಜನರನ್ನು ಉದ್ದೇಶಿ ಮಾತನಾಡುತ್ತ ಕಣ್ಣೀರಿಟ್ಟಿದ್ದರು.

ಅವತ್ತು ಕೂಡ ಸಿಎಂ ಕಣ್ಣೀರಿನ ಕಥೆಗೆ ಕಾರಣ ಸಿಎಂ ಬದಲಾವಣೆ ವಿಚಾರವೇ ಎನ್ನಲಾಗುತ್ತಿತ್ತು. ಜೊತೆಗೆ, ಈ ಸಂಬಂಧ ಸಾಕಷ್ಟು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಮತ್ತೊಂದು ಸನ್ನಿವೇಶ ಸೃಷ್ಠಿಸಿದ್ದಾರೆ ಸಿಎಂ ಬೊಮ್ಮಾಯಿ. ಬೆಳಗಾವಿಯಲ್ಲಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಿಎಂ ಮತ್ತೆ ಬದಲಾವಣೆ ಸುಳಿವು ನೀಡಿದ್ದಾರೆ. ಬದಲಾವಣೆ ಜಗದ ನಿಯಮ ಬದಲಾವಣೆಗೆ ಹೊಂದಿಕೊಂಡು ನಡೆದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹತಾಶೆಯ ನುಡಿಗಳನ್ನಾಡಿದ್ದಾರೆ.

ಹೀಗೆ ಹತಾಶೆರಾಗಿ ಬೊಮ್ಮಾಯಿ ಹೇಳಲು ಕಾರಣವಿದೆ. ರಾಜಕೀಯ ಲೆಕ್ಕಾಚಾರದ ಪ್ರಕಾರ ಫೆಬ್ರವರಿ ನಂತರ ಸಿಎಂ ಬದಲಾವಣೆಗೆ ಸಿದ್ದತೆ ನಡೆದಿದೆ ಎಂಬ ಮಾಹಿತಿ ಇದೆ. ಬಿಟ್‌ಕಾಯಿನ್‌ ಹಗರಣ ಮತ್ತು ಬಿಜೆಪಿ ನಾಯಕರ ಆಂತರಿಕ ಕಚ್ಚಾಟ ಶಮನ ಮಾಡಲು ಹೈಕಮಾಂಡ್ ಸಂಕ್ರಾಂತಿ ನಂತರ ಸರ್ಕಾರಕ್ಕೆ ಮೇಜರ್ ಸರ್ಜರಿ ಮಾಡುತ್ತೆ ಎಂದು ಹೇಳಲಾಗ್ತಿದೆ. ಪದೇ ಪದೆ ಸಿಎಂ ಬದಲಾವಣೆ ಆದರೆ, ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತೆವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅನಾರೋಗ್ಯದ ಸಮಸ್ಯೆಯನ್ನು ಮುಂದಿಟ್ಟು ಅವರಿಂದ ರಾಜೀನಾಮೆ ಪಡೆಯುತ್ತಾರೆ ಎಂದು ಕೂಡ ಚರ್ಚೆ ನಡೆಯುತ್ತಿದೆ. ಹೀಗಾಗಿಯೇ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಜನರನ್ನು ನೋಡಿ ಬಾವುಕರಾಗಿ ಮಾತನಾಡಿದ್ದು ಎನ್ನಲಾಗ್ತಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ಸದ್ಯದಲ್ಲೇ ಸಿಎಂ ತಲೆದಂಡವಾಗುತ್ತೆ ಎಂಬ ಸುಳಿವು ಕಾಣಿಸುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಸಿಎಂ ಹೇಳಿಕೆ ನೀಡುತ್ತಿದ್ದಾರೆ.. ಆದರೆ, ಮುಂದಿನ ಲೆಕ್ಕಾಚಾರಗಳು ಏನಾಗುತ್ತೆ ಅಂತ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES