ಬಳ್ಳಾರಿ : ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಜನಾರ್ಧನ ರೆಡ್ಡಿ ನಾನು ಆದಷ್ಟು ಬೇಗ ಗುಣಮುಖನಾಗಿ ಹೊರಬರುತ್ತೇನೆಂದು ಹೇಳಿದ್ದಾರೆ. ಇದರಿಂದ ನಾಳೆ ಮತ್ತು ನಾಡಿದ್ದು ಜನಾರ್ಧನ ರೆಡ್ಡಿ ಬಳ್ಳಾರಿ ಪ್ರವೇಶ ಕ್ಯಾನ್ಸಲ್ ಆಗಿದೆ. ಸಚಿವ ಶ್ರೀರಾಮುಲು ತಾಯಿ ಪುಣ್ಯತಿಥಿ ಕಾರ್ಯಕ್ಕೆ ಬರಲು ಜನಾರ್ಧನ ರೆಡ್ಡಿಗೆ ಎರಡು ದಿನಗಳ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದ್ರೆ ಇದೀಗ ಜನಾರ್ಧನ ರೆಡ್ಡಿಗೆ ಪಾಸಿಟಿವ್ ಆದ ಕಾರಣ ಜನಾರ್ಧನ ರೆಡ್ಡಿ ಆಸ್ಪತ್ರೆಗೆ ದಾಖಲಾಗಿದ್ದು ಬಳ್ಳಾರಿ ಭೇಟಿ ರದ್ದುಗೊಂಡಿದೆ.
ಫೇಸ್ ಬುಕ್ ನಲ್ಲಿ ಜನಾರ್ದನ್ ರೆಡ್ಡಿ ಬರೆದ ಪತ್ರ:
“ಇಂದು ಸಂಜೆ ನನಗೆ ಕೊರೋನಾ ಸೋಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ ನಾನು ನಾಳೆ ಆಗಸ್ಟ್ 30 ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ.” ಎಂದು ಜನಾರ್ಧನ ರೆಡ್ಡಿ ಬರೆದುಕೊಂಡಿದ್ದಾರೆ.
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ