ದೇವನಹಳ್ಳಿ : ಸಿಲಿಕಾನ್ ಸಿಟಿಯ ಕೂಗಳತೆ ದೂರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೀಗ ಜಿಲ್ಲಾ ಕೇಂದ್ರದ ವಿವಾದ ಪ್ರಾರಂಭವಾಗಿದೆ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಸಹ ಬದಲಾವಣೆ ಮಾಡಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ ಇದಕ್ಕೆ ಪರ ವಿರೋಧ ಸಹ ಶುರುವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ, ಹೊಸಕೋಟೆ,ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ನಾಲ್ಕು ತಾಲೂಕುಗಳನ್ನು ಒಳಗೊಂಡಿದೆ ಆದ್ರೆ ಇಲ್ಲಿಯವರೆಗೆ ಜಿಲ್ಲೆಗೆ ಜಿಲ್ಲಾ ಕೇಂದ್ರ ಮಾತ್ರ ಇರಲಿಲ್ಲ. 1986 ರ ಆ. 15 ರಂದು ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ರೂಪುಗೊಂಡಿತು. ಆರಂಭದಲ್ಲಿ ರಾಮನಗರ ಜಿಲ್ಲೆ ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇರಿಕೊಂಡಿತ್ತು. ಆದರೆ 2007 ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿದ ಬಳಿಕ ಹೊಸಕೋಟೆ, ನೆಲಮಂಗಲ,ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉಳಿದುಕೊಂಡಿದ್ದವು. ಇದೀಗ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ದೇವನಹಳ್ಳಿ ಬಳಿಯ ಬೀರಸಂದ್ರ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಛೇರಿ ಪ್ರಾರಂಭವಾಯಿತು. ಜಿಲ್ಲೆಯ ಎಲ್ಲ ಇಲಾಖೆಗಳು ಸಹ ಇಲ್ಲಿಗೆ ವರ್ಗಾವಣೆ ಆದವು. ಆದ್ರೆ ನಾಲ್ಕು ತಾಲೂಕುಗಳಿಗೆ ಜಿಲ್ಲಾ ಕೇಂದ್ರದ ಕೊರತೆ ಎದ್ದು ಕಾಣುತ್ತಿತ್ತು. ಇದೀಗ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಬಹುತೇಕ ಎಲ್ಲ ಶಾಸಕರಿಗೆ ಒಪ್ಪಿಗೆ ಇದೆ ಆದ್ರೆ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರಿನ ಬದಲು ದೇವನಹಳ್ಳಿ ಎಂದು ಬದಲಾವಣೆ ಮಾಡಬೇಕು ಎಂಬುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವ ಭೂಪಟದಲ್ಲಿ ಬೆಂಗಳೂರು ಎಂಬ ಹೆಸರು ಗುರುತಿಸಿಕೊಂಡಿದೆ. ಗ್ರಾಮಾಂತರ ಜಿಲ್ಲೆಯ ಹೆಸರಿನಲ್ಲಿ ಬೆಂಗಳೂರು ಎಂಬುದು ಮುಂದುವರಿಯಬೇಕು ಎಂಬುದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೋರಾಟಗಾರರ ಸಮಿತಿ ಸಂಚಾಲಕ ಹಿತ್ತರಹಳ್ಳಿ ರಮೇಶ್ ಹಾಗೂ ಇತರರ ವಾದವಾಗಿದೆ.
ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಲು ಎಲ್ಲರ ಸಹ ಮತವಿದೆ. ಆದ್ರೆ ಜಿಲ್ಲೆಯ ಹೆಸರು ಮಾತ್ರ ಬೆಂಗಳೂರು ಎಂಬ ಹೆಸರಿನಲ್ಲಿ ಇರಬೇಕು ಎಂಬುದು ಹಲವಾರ ವಾದ.
ರಾಮಾಂಜಿ.ಎಂ ಬೂದಿಗೆರೆ.