ಕೋಲಾರ : ಸ್ಮೈಲ್ ಪ್ಲೀಸ್ ಎನ್ನುತ್ತಿದ್ದ ಫೋಟೋಗ್ರಾಫರ್ ಗಳು ಇದೀಗ ದುಃಖದಲ್ಲಿದ್ದಾರೆ. ಮುಖದ ಅಂದವನ್ನು ಹೆಚ್ಚಿಸ್ತಿದ್ದ ವಿಡಿಯೋಗ್ರಾಫರುಗಳು ಇದೀಗ ಕಳೆಗುಂದಿದ್ದಾರೆ. ಕೋವಿಡ್ ಪರಿಣಾಮವಾಗಿ ನಷ್ಟಕ್ಕೀಡಾದ ಸ್ಟುಡಿಯೋ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಈ ಕುರಿತಾದ ಒಂದು ವಿಶೇಷ ವರದಿ.
ಅದೆಂಥದ್ದೇ ಶುಭ ಕಾರ್ಯಕ್ರಮವಿರಲಿ ಅಲ್ಲಿ ಫೋಟೋ ಮತ್ತು ವಿಡಿಯೋಗ್ರಾಫರುಗಳು ಇರ್ಲೇಬೇಕು. ಅಲ್ಲಿರೋರ ಕೈಯಲ್ಲಿ ಲಕ್ಷ ರುಪಾಯಿ ಬೆಲೆಯ ಮೊಬೈಲಿದ್ರೂ ಕೂಡಾ ವೃತ್ತಿ ನಿರತ ಫೋಟೋಗ್ರಾಫರುಗಳು ತೆಗೆಯೋ ಫೋಟೋಗಳೇ ಮುಖ್ಯವಾಗಿರುತ್ತೆ. ಕಾರ್ಯಕ್ರಮದಲ್ಲಿ ನೆರೆದವ್ರನ್ನು ಬಲವಂತವಾಗಿ ನಗಿಸುತ್ತಲೆ ಫೋಟೋ ಕ್ಲಿಕ್ ಮಾಡುವ ಫೋಟೋಗ್ರಾಫರ್ ಗಳ ಬದುಕು ಇದೀಗ ಕಷ್ಟಕರವಾಗಿದೆ. ಇದು ಮಹಾಮಾರಿ ಕೋವಿಡ್ ಎಸಗಿರುವ ದುಷ್ಪರಿಣಾಮದ ಸ್ಯಾಂಪಲ್ಲು.
ತೀರಾ ಮೊನ್ನೆಯವರೆಗೂ ಫೋಟೋಗ್ರಾಫರುಗಳಿಲ್ಲದೆ ಯಾವುದೇ ಶುಭ ಸಮಾರಂಭ ನಡೀತಾನೆ ಇರ್ಲಿಲ್ಲ. ಆದ್ರೆ, ಐದಾರು ತಿಂಗಳ ಹಿಂದೆ ವಕ್ಕರಿಸಿದ ಕೊರೋನಾ ವೈರಸ್ ನ ಕಾರಣಕ್ಕಾಗಿ ಮುಖ್ಯವಾಹಿನಿಯಿಂದ ಹಿಂದೆ ಸರಿದ ಫೋಟೋಗ್ರಾಫರುಗಳು ಇದುವರೆಗೂ ಕಷ್ಟದಲ್ಲಿದ್ದಾರೆ. ಲಾಕ್ ಡೌನ್ ರದ್ದಾದ ಮೇಲೂ ಆಡಂಭರದ ಶುಭ ಸಮಾರಂಭಗಳಿಗೆ ಜನ್ರು ಆಸಕ್ತಿಯನ್ನು ತೋರಿಸ್ತಿಲ್ಲ. ಇದ್ರ ಪ್ರತಿಕೂಲ ಪರಿಣಾಮವು ಫೋಟೋ-ವಿಡಿಯೋಗ್ರಾಫರುಗಳ ಮೇಲೆ ಆಗಿದೆ.
ರಾಜ್ಯದಲ್ಲಿ ಹತ್ತತ್ರ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಫೋಟೋ ಸ್ಟುಡಿಯೋಗಳಿವೆ. ಈ ಉದ್ಯಮದಲ್ಲಿ ಮಾಲಿಕರೂ ಸೇರಿದಂತೆ ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಕೋವಿಡ್ ಸಂಕಷ್ಟದ ಕಾರಣಕ್ಕಾಗಿ ಸಂಸಾರವೂ ಸೇರಿದಂತೆ ಸ್ಟುಡಿಯೋಗಳ ನಿರ್ವಹಣೆಗೆ ತೊಂದ್ರೆಯಾಗಿದೆ. ಸ್ಟುಡಿಯೋ ಮಾಲಿಕರ ಕಷ್ಟ ಆಲಿಸುವಂತೆ ಸರ್ಕಾರಕ್ಕೆ ಮಾಡಿಕೊಂಡ ಮನವಿಯು ಇದುವರೆಗೂ ಫಲ ಕೊಟ್ಟಿಲ್ಲ.
ಒಟ್ನಲ್ಲಿ, ಕೋವಿಡ್ ಹೊಡೆತಕ್ಕೆ ಸಿಕ್ಕಿ ನಲುಗಿದ ಬಹಳಷ್ಟು ಕ್ಷೇತ್ರಗಳಲ್ಲಿ ನೊಂದವ್ರಿಗೆ ಸರ್ಕಾರ ನೆರವಿಗೆ ಬಂದಿದೆ. ಅದೇ ರೀತಿಯಾಗಿ ನಮಗೂ ಸರ್ಕಾರದ ಸಹಾಯ ಸಿಗಲಿ ಅಂತ ಮನವಿ ಮಾಡ್ತಿರುವ ಸ್ಟುಡಿಯೋ ಮಾಲಿಕರ ಮೊರೆಯನ್ನು ಸರ್ಕಾರ ಆಲಿಸಬೇಕಾಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.