ಮಂಗಳೂರು: ಯಕ್ಷಲೋಕದ ಛಂದೋ ಬ್ರಹ್ಮ ಎಂದೇ ಹೆಸರಾಗಿದ್ದ ಡಾ | ಶಿಮಂತೂರು ನಾರಾಯಣ ಶೆಟ್ಟಿಯವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 86 ವರುಷ ವಯಸ್ಸಾಗಿದ್ದ ಅವರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಮಂಗಳೂರಿನ ಮುಲ್ಕಿ ಸಮೀಪದ ಎಳತ್ತೂರು ಗುತ್ತು ಎಂಬಲ್ಲಿ ನೆಲೆಸಿದ್ದ ಡಾ | ನಾರಾಯಣ ಶೆಟ್ಟಿ ಅವರು, ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿ ಹಂಪಿಯ ಕನ್ನಡ ವಿವಿಯಿಂದ ಡಿ. ಲಿಟ್. ಪದವಿಯನ್ನೂ ಪಡೆದಿದ್ದರು. ಕಾರ್ಕಳ ತಾಲೂಕು ನಂದಿಕೂರಿನಲ್ಲಿ ಎಳತ್ತೂರು ಗುತ್ತು ದಿ|ಅಚ್ಚಣ್ಣ ಶೆಟ್ಟಿ ಮತ್ತು ನಂದಿಕೂರು ಚೀಂಕ್ರಿಗುತ್ತು ದಿ| ಕಮಲಾಕ್ಷಿ ಶೆಡ್ತಿ ದಂಪತಿಯ ಪುತ್ರನಾಗಿ 1934 ಫೆ. 1ರಂದು ಜನಿಸಿದ್ದ ಇವರು, ಐದನೇ ತರಗತಿಯಲ್ಲಿದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋನುಬಂಧ ಶಾಸನಗಳನ್ನು ಅಧ್ಯಯನ ಮಾಡಿದರು. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಾರಾಯಣ ಶೆಟ್ಟರು ದೇರಾಜೆ ಸ್ಮತಿ ಗೌರವ, ಕುಕ್ಕಿಲ ಪ್ರಶಸ್ತಿ, ಸನಾತನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಶ್ರೇಷ್ಠ ಯಕ್ಷಗಾನ ಸಾಹಿತ್ಯ ಸಾಧನಾ ಪ್ರಶಸ್ತಿ, ವಿಂಶತಿ ತಮ ವಿದ್ವತ್ ಪ್ರಶಸ್ತಿ, ಸ್ಕಂದ ಪುರಸ್ಕಾರ, ತಲ್ಲೂರು ಕನಕಾ-ಅಣ್ಣಯ್ಯ ಪ್ರಶಸ್ತಿ, ಮುದ್ದಣ ಪುರಸ್ಕಾರ, ಕಲ್ಕೂರ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಮಾತ್ರವಲ್ಲದೇ ಅಭಿನವ ನಾಗವರ್ಮ, ಯಕ್ಷ ಪಾಣಿನಿ, ಛಂದೋಂಬುಧಿ ಚಾರು ಚಂದ್ರ, ಛನಶ್ಚತುರಾನನ, ಯಕ್ಷ ಛಂದೋ ಭಾರ್ಗವ, ಛಂದೋ ವಾರಿಧಿ ಚಂದ್ರ ಬಿರುದುಗಳನ್ನೂ ಪಡೆದಿದ್ದರು. ಕನ್ನಡದ ಅನಘ ಛಂದೋ ರತ್ನಗಳು, ಯಕ್ಷಗಾನ ಛಂದೋಂಬುಧಿ , ವಿಚಿತ್ರಾ ತ್ರಿಪದಿ ಮುಂತಾದ ಅಮೂಲ್ಯ ಕೃತಿಗಳನ್ನೂ ಹಾಗೂ ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜಮುದ್ರಿಕಾ, ಸೊರ್ಕುದ ಸಿರಿಗಿಂಡಿ ಮುಂತಾದ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನೇ ಅಗಲಿರುವ ಡಾIನಾರಾಯಣ ಶೆಟ್ಟಿ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಸಮಾಜದ ಎಲ್ಲಾ ವರ್ಗದ ನಾಯಕರೂ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು