Monday, February 3, 2025

ರಾಜ್ಯದಲ್ಲಿ ಐದನೆ ಸ್ಥಾನಕ್ಕೇರಿದ ಕೋಲಾರ ಜಿಲ್ಲೆಯ ಅರಣ್ಯ ಬೆಳವಣಿಗೆ

ಕೋಲಾರ : ಕೋಲಾರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಭೌತಿಕ ವ್ಯಾಪ್ತಿಯು ಹಿಗ್ಗಿದೆ ಅನ್ನೋ ಆಶಾದಾಯಕವಾದ ವರದಿಯು ಪ್ರಕಟವಾಗಿದೆ. ಸತತ ಬರಗಾಲಕ್ಕೆ ಗುರಿಯಾಗ್ತಿರೋ ಈ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಬೆಳವಣಿಗೆ ಸಾಧ್ಯವಾ ಅಂತ ಹುಬ್ಬೇರಿಸ್ತೀರಲ್ವ. ಹೇಗೆ ಸಾಧ್ಯವಾಯ್ತು ಅಂತ ತಿಳ್ಕೋಳ್ಳೋಕೆ ಈ ವರದಿಯನ್ನು ನೋಡಿ.

ಕೋಲಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಅಂತಾನೇ ಗುರ್ತಿಸೋದು ಮೊದಲಿನಿಂದಲೂ ರೂಢಿಯಲ್ಲಿದೆ. ಇಲ್ಲಿ ವರ್ಷಕ್ಕೆ ಬೀಳೋ 715 ಮಿಲಿ ಮೀಟರ್ನಷ್ಟು ವಾಡಿಕೆ ಮಳೆಯು ಯಾವುದಕ್ಕೂ ಸಾಲೋದಿಲ್ಲ. ಈ ಜಿಲ್ಲೆಯಲ್ಲಿ ಎರಡು ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಬೋರ್ವೆಲ್ ಕೊರೆದು ನೀರನ್ನು ಹೊರತೆಗೆಯುವ ವ್ಯವಸ್ಥೆಯಿದೆ. ಪ್ರತೀ ವರ್ಷವೂ ಬರಗಾಲ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಕೋಲಾರ ಜಿಲ್ಲೆಯು ಇದ್ದೇ ಇರುತ್ತೆ. ಇಷ್ಟೆಲ್ಲ ಹಿನ್ನಡೆಯಿರುವ ಕೋಲಾರ ಜಿಲ್ಲೆಯಲ್ಲಿ ಇದೀಗ ಅರಣ್ಯ ಪ್ರದೇಶದ ವ್ಯಾಪ್ತಿಯು ಹೆಚ್ಚಾಗಿರುವ ಅಧಿಕೃತ ಮಾಹಿತಿಯಿದೆ.
ಕೋಲಾರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಪ್ರದೇಶಗಳ ಒಟ್ಟು ವ್ಯಾಪ್ತಿಯು 50 ಸಾವಿರ ಹೆಕ್ಟೇರ್ನಷ್ಟಿದೆ. ಸತತ ಬರಗಾಲದ ಕಾರಣದಿಂದಾಗಿ ಅರಣ್ಯ ಪ್ರದೇಶದ ಅಭಿವೃದ್ದಿ ಸಾಧ್ಯವಾಗಿರಲಿಲ್ಲ. ಆಗಾಗ ಬೀಳುವ ಅಲ್ಪ-ಸ್ವಲ್ಪ ಮಳೆಯೇನಾದ್ರೂ ಕೈ ಕೊಟ್ರೆ ನೆಟ್ಟಿರುವ ಗಿಡಗಳನ್ನು ಉಳಿಸಿಕೊಳ್ಳುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾಹಸದ ಕೆಲಸವಾಗಿದೆ. ಇಂಥಹ ಪರಿಸ್ಥಿತಿಯಲ್ಲಿಯೂ ಜಿಲ್ಲಾದ್ಯಂತ 61 ಚದುರ ಕಿಲೋ ಮೀಟರ್ ಪ್ರದೇಶದಲ್ಲಿ ಮತ್ತಷ್ಟು ಅರಣ್ಯವನ್ನು ಅಭಿವೃದ್ದಿ ಮಾಡಿರುವುದು ಇಲಾಖೆಯ ಬದ್ದತೆಗೆ ಸಾಕ್ಷಿಯಾಗಿದೆ.
ಈಗಾಗಲೇ ಗುರುತಿಸಿರುವ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರಗಡೆ ಯಥೇಚ್ಛವಾಗಿ ಕಾಡು ಅಭಿವೃದ್ದಿಯಾಗಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ನೆಡುತೋಪು-ಗುಂಡುತೋಪು ಅಭಿವೃದ್ದಿ ಮಾಡಲಾಗಿದೆ. ಇವೆಲ್ಲವೂ ಅರಣ್ಯ ಪ್ರದೇಶವನ್ನು ಅಭಿವೃದ್ದಿಗೊಳಿಸಲು ನೆರವಾಗಿದೆ.
ಒಟ್ನಲ್ಲಿ, ಬರಗಾಲದ ಜಿಲ್ಲೆಯಲ್ಲಿ ಹಸಿರು ಅಭಿವೃದ್ದಿ ಮಾಡೋದಕ್ಕಾಗಿ ಶ್ರಮಿಸ್ತಿರುವ ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳಬೇಕಾಗಿದೆ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

RELATED ARTICLES

Related Articles

TRENDING ARTICLES