Monday, February 3, 2025

ಲಾಕ್ ಡೌನ್ ಅವಧಿಯ ವೇತನ ಮತ್ತು ಸೇವಾ ಭದ್ರತೆಗೆ ಆಗ್ರಹ | ಅತಿಥಿ ಉಪನ್ಯಾಸಕರ ಪ್ರತಿಭಟನೆ

ಶಿವಮೊಗ್ಗ : ಅತಿಥಿ ಉಪನ್ಯಾಸಕರಿಗೆ ಲಾಕ್‍ಡೌನ್ ಅವಧಿಯ ವೇತನ ಮತ್ತು ಸೇವಾ ಭದ್ರತೆ ನೀಡುವ ಸಂಬಂಧ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ, ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದಾರೆ. ಇಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸದಸ್ಯರು, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅತಿಥಿ ಉಪನ್ಯಾಸಕರು ರಾಜ್ಯಸಮನ್ವಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಬೇಡಿಕೆಗಳನ್ನು ಈಡೇರಿಸುವವರೆಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಾರದ ಒಂದು ದಿನದ ಸತ್ಯಾಗ್ರಹವನ್ನು ಕಳೆದ 8 ವಾರಗಳಿಂದ ಮಾಡುತ್ತಲೇ ಬಂದಿದ್ದೇವೆ. ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು. ಕೊರೋನಾದಂತಹ ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಅನಿವಾರ್ಯವಾದ ಪ್ರಕ್ರಿಯೆಯನ್ನು ಸರ್ಕಾರದ ಮುಂದೆ ಮಂಡಿಸುತ್ತಲೇ ಬಂದಿದ್ದೇವೆ. ನಿರಂತರವಾಗಿ ಲಾಕ್‍ಡೌನ್ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋವಿಡ್-19ರ ಮಾರ್ಗಸೂಚಿಯಂತೆ ವೇತನ ನೀಡಿ ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿದ್ರು. ಸರ್ಕಾರ ನಮಗೆ ನೀಡಬೇಕಾಗಿರುವ ಬಿಕ್ಷೆಯಲ್ಲ. ದಶಕಗಳಿಂದ ಕನಿಷ್ಟ ವೇತನಕ್ಕೆ ದುಡಿದು ಸಾವಿರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿಕೊಟ್ಟಿದ್ದೇವೆ. ನಮ್ಮೆಲ್ಲ ನೋವನ್ನು ನುಂಗಿ ಇದುವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಎಲ್ಲ ಸತ್ಯ ಗೊತ್ತಿರುವ ಸರ್ಕಾರ ಮತ್ತು ಇಲಾಖೆ ನಮ್ಮತ್ತ ಗಮನನೀಡುತ್ತಿಲ್ಲ ಎಂದು ದೂರಿದ್ರು. ಇದುವರೆಗೂ 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆಗಳನ್ನು ಸರ್ಕಾರ ಮತ್ತು ಇಲಾಖೆ ಉಡಾಫೆಯಿಂದ ನೋಡುತ್ತಿದೆ. ಜೊತೆಗೆ ಈ ಲಾಕ್‍ಡೌನ್ ಸಮಯದಲ್ಲಿ 7 ಜನ ಅತಿಥಿ ಉಪನ್ಯಾಸಕರು ಚಿಕಿತ್ಸೆಗೆ ಹಣವಿಲ್ಲದೇ ಅಸುನೀಗಿದ್ದಾರೆ. ಸೌಜನ್ಯಕ್ಕೂ ಉನ್ನತ ಶಿಕ್ಷಣ ಸಚಿವರಾಗಲೀ ಅಥವಾ ಉನ್ನತ ಶಿಕ್ಷಣ ಇಲಾಖೆಯಾಗಲೀ ಸಂಕಷ್ಟಗಳನ್ನು ಆಲಿಸದೇ ಇರುವಷ್ಟು ಕಿವುಡರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ಈಗಾಗಲೇ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರಿಗೆ 10 ಲಕ್ಷ ರೂ. ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದ್ರು. ಸರ್ಕಾರ ಇನ್ನಾದರೂ ಕೂಡಲೇ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಧಾವಿಸಿ ಉಪನ್ಯಾಸಕರ ಮಾನವೀಯ ಬೇಡಿಕೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ ವಿನೂತನ ಮಾದರಿಯ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿದ್ದವಾಗಬೇಕಾಗುತ್ತದೆ ಎಂದು ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES