ಆನೇಕಲ್ : ಗಣೇಶ ವಿಸರ್ಜನೆಗೆಂದು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ನೀರು ಪಾಲಾಗಿರುವಂತಹ ಘಟನೆ ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಗ್ರಾಮದ ಕೆರೆಯಲ್ಲಿ ನಡೆದಿದೆ. ಸೂಳಗಿರಿ ಗ್ರಾಮದ ವಾಸಿಗಳಾದ ಭೂಪತಿ (12) ಹಾಗು ಮುರಳಿ (11) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕರಾಗಿದ್ದಾರೆ. ಗಣೇಶ ಚತುರ್ಥಿ ಅಂಗವಾಗಿ ಮನೆಯ ಸಮೀಪ ಗಣೇಶ ವಿಗ್ರಹವನ್ನು ಸ್ನೇಹಿತರ ಜೊತೆ ಸೇರಿ ಪ್ರತಿಷ್ಠಾಪನೆ ಮಾಡಿದ್ದ ಬಾಲಕರು ಮೂರು ದಿನದ ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅನಾಸಂದ್ರಂ ಕೆರೆಗೆ ಹೋಗಿ ನೀರಿನ ಆಳದ ಅರಿವಿಲ್ಲದೆ ನೀರಿಗೆ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆಯೇ ಗಣೇಶ ಮೂರ್ತಿ ಜೊತೆಗೆ ಬಾಲಕರಿಬ್ಬರು ಸಹ ನೀರು ಪಾಲಾಗಿದ್ದಾರೆ. ಜೊತೆಯಲ್ಲಿ ತೆರಳಿದ್ದ ಸ್ನೇಹಿತರು ಸಹ ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಸೂಳಗಿರಿ ಪೊಲೀಸರು ಸ್ಥಳೀಯರ ನೆರವಿನಿಂದ ನೀರುಪಾಲಾಗಿದ್ದ ಇಬ್ಬರು ಬಾಲಕರ ಶವವನ್ನು ಹೊರತೆಗೆದು ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.