ವಿಜಯಪುರ : ನಾಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದು, ಸಿಎಂ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಬಾಗಿನ ಅರ್ಪಣೆ ಮಾಹಿತಿ ಇಲ್ಲದಿದ್ದರೂ, ಅಧಿಕಾರಿ ವರ್ಗ ಮಾತ್ರ ಬಾಗಿನ ಅರ್ಪಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ ಹೇಳಿದ್ದಾರೆ. ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದು, ಇಲ್ಲಿ ಸಹಜವಾಗಿಯೇ ಸಿಎಂ ಬಿ ಎಸ್ ವೈ ಕೃಷ್ಣೆಗೆ ಬಾಗಿನ ಅರ್ಪಿಸುತ್ತಾರಾ ಎಂಬ ಗೊಂದಲ ಸಹ ಇದೆ, ಅವರ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಬಾಗಿನ ಅರ್ಪಣೆ ಮಾಹಿತಿ ಇಲ್ಲದಿದ್ದರೂ, ಅಧಿಕಾರಿಗಳು ಮಾತ್ರ ಬಾಗಿನ ಅರ್ಪಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ನಾಳೆ ಸಿಎಂ ಬೆಳಗಾವಿಯಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಆಲಮಟ್ಟಿಗೆ ಆಗಮಿಸಿ, ಜಲಾಶಯವನ್ನು ವೀಕ್ಷಿಸಲಿದ್ದಾರೆ. ನಂತರ ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಎರಡು ಗಂಟೆಯವರೆಗೆ ಆಲಮಟ್ಟಿಯಲ್ಲಿ ಸಿಎಂ ಇರುವ ಕಾರಣ ಅವರು ಭೇಟಿ ನೀಡುವ ಸ್ಥಳಗಳಲ್ಲಿ ವೈದ್ಯಕೀಯ ತಂಡ ಇರಲಿದ್ದು, ಹೆಲಿಕಾಪ್ಟರ್ನಿಂದ ಇಳಿದ ಬಳಿಕ ಥರ್ಮಲ್ ಸ್ಕ್ರೀನಿಂಗ್ಗೆ ಸಿಎಂ ಒಳಗಾಗಲಿದ್ದಾರೆ. ಜೊತೆಗೆ ಸಿಎಂ ಅವರಿಗೆ ಅಡುಗೆ ತಯಾರಿಸುವವರು, ಊಟ ಬಡಿಸುವವರನ್ನು ಸಹ ರ್ಯಾಪಿಡ್ ಟೆಸ್ಟ್ಗೆ ಒಳಗಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು…