ಮೈಸೂರು : ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಾ ಸಾಗಿದೆ. ಈ ಮಧ್ಯೆ ಇದಕ್ಕೊಂದು ಅಂತ್ಯ ಹಾಡಬೇಕಿದ್ದ ಸರ್ಕಾರವಿನ್ನೂ ತನಿಖೆಗೆ ಆದೇಶವನ್ನೇ ಹೊರಡಿಸಿಲ್ಲ. ಘಟನೆ ನಡೆದು ನಾಲ್ಕು ದಿನಗಳು ಕಳೆದ್ರೂ ತನಿಖೆಯೇ ಆರಂಭವಾಗಿಲ್ಲದಿರುವುದು ಸೋಜಿಗವಾಗಿದೆ. ನಾಗೇಂದ್ರ ಸಾವಿನ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉದ್ಭವವಾಗಿದ್ರೂ ಸರ್ಕಾರ ತಲೆ ಕೆಡಿಸಿಕೊಳ್ಳದಿರುವುದು ಭಾರಿ ಗೊಂದಲ ಮೂಡಿಸುತ್ತಿದೆ.
ಸರ್ಕಾರದಿಂದ ತನಿಖೆ ನಡೆಸುವಂತೆ ಇನ್ನೂ ಆದೇಶ ಬಂದಿಲ್ಲವೆಂದು ಅಚ್ಚರಿಯ ಹೇಳಿಕೆಯನ್ನ ಖುದ್ದು ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ಬಹಿರಂಗಪಡಿಸಿದ್ದಾರೆ. ಇದುವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಮೌಖಿಕವಾಗಿಯೂ ತಿಳಿಸಿಲ್ಲ. ಆದೇಶ ಬಂದ ನಂತರ ತನಿಖೆ ಆರಂಭಿಸುವುದಾಗಿ ತಳಿಸಿದ್ದಾರೆ.
ಸರ್ಕಾರದ ವಿಳಂಬ ಧೋರಣೆ ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ. ಡಾ.ನಾಗೇಂದ್ರ ಸಾವಿನ ನಂತರ ಸಾಕಷ್ಟು ಬೆಳವಣಿಗೆಗಳಾಗಿದೆ. ಡಾ.ನಾಗೇಂದ್ರ ಸಾವಿಗೆ ಸೂಕ್ತ ಕಾರಣ ಸಿಕ್ಕಿಲ್ಲ. ಕೆಲಸದ ಒತ್ತಡದಿಂದ ಎಂಬ ಆರೋಪ ಕೇಳಿ ಬಂದಿದೆ. ಇದೇ ಆರೋಪವನ್ನ ಡಾ.ನಾಗೇಂದ್ರ ಕುಟುಂಬಸ್ಥರು ಮಾಡಿ ಜಿಲ್ಲಾ ಪಂಚಾಯ್ತಿ ಸಿಇಓ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಈಗಾಗಲೇ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಮೇಲೆ FIR ದಾಖಲಾಗಿದೆ. ಇದರ ಬೆನ್ನ ಹಿಂದೆಯೇ ಸಿಇಓ ವರ್ಗಾವಣೆ ಆದೇಶವನ್ನ ಸರ್ಕಾರ ಹೊರಡಿಸಿದೆ. ಅಲ್ಲದೆ ಸಿಇಓ ರನ್ನ ಸಸ್ಪೆಂಡ್ ಮಾಡಿ ಅಂತ ಸರ್ಕಾರಿ ವೈದ್ಯ ಸಮೂಹ ನಿರಂತರವಾಗಿ ಮೂರು ದಿನ ಮುಷ್ಕರ ನಡೆಸಿದೆ. ಸಿಇಓ ವರ್ಗಾವಣೆಯನ್ನ ರದ್ದುಪಡಿಸಿ ಅಂತ ಪಿಡಿಓ ಗಳು ಮತ್ತೊಂದೆಡೆ ಸಿಡಿದು ನಿಂತಿದ್ದಾರೆ. ಪ್ರಶಾಂತ್ ಕುಮಾರ್ ಮಿಶ್ರ ದಕ್ಷ ಪ್ರಾಮಾಣಿಕ ಅಧಿಕಾರಿ, ಯಾವತ್ತೂ ಸಹ ಹೀಗೆ ವರ್ತಿಸಿಲ್ಲ ವರ್ಗಾವಣೆಯನ್ನ ರದ್ದು ಮಾಡಿ ಅಂತ ಒತ್ತಾಯಿಸಿ ಇಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಕೊಟ್ಟಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ಆಗಿದೆ. ಮೊದಲ ದಿನ ವೈದ್ಯರು ಮುಷ್ಕರ ಹೂಡಿದಾಗ್ಲೇ ಮುಖ್ಯಮಂತ್ರಿಗಳು ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿರುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಇನ್ನೂ ಪ್ರಾದೇಶಿಕ ಆಯುಕ್ತರಿಗೆ ತನಿಖೆ ನಡೆಸಲು ಆದೇಶ ಬಾರದಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ. ಡಾ.ನಾಗೇಂದ್ರ ಸಾವಿನ ಪ್ರಕರಣ ಮತ್ತಷ್ಟು ಜಠಿಲವಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ..