ಕೋಲಾರ : ವೃತ್ತಿಯಲ್ಲಿ ವೈದ್ಯರೂ ಆಗಿರುವ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರ ದರ್ಪದ ನಡವಳಿಕೆಗೆ ಸಾಕ್ಷಿ ಸಿಕ್ಕಿದೆ. ರೋಗಿಯೊಬ್ಬನಿಗೆ ಚಿಕಿತ್ಸೆ ಕೊಡಲು ವಿಳಂಬ ಮಾಡಿದ ಬಗ್ಗೆ ಪ್ರಶ್ನಿಸಿದ ಪೋಷಕರಿಗೆ ವೈದ್ಯರೇ ಆವಾಜ್ ಹಾಕಿದ್ದಾರೆ. ಡಾ.ವೇಣುಗೋಪಾಲ್ ಅವ್ರ ವರ್ತನೆಯ ವಿಡಿಯೋ ಇದೀಗ ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೋಲಾರ ಜಿಲ್ಲಾಧ್ಯಕ್ಷರೂ ಆಗಿರುವ ಡಾ.ವೇಣುಗೋಪಾಲ್ ಅವ್ರಿಗೆ ಶ್ರೀನಿವಾಸಪುರದಲ್ಲಿ ಪವನ್ ನರ್ಸಿಂಗ್ ಹೋಂ ಇದೆ. ಭಾನುವಾರ ಸಂಜೆ ವೇಳೆಗೆ ಪೋಷಕರೊಬ್ಬರು ಡಾ.ವೇಣುಗೋಪಾಲ್ ಅವ್ರ ಬಳಿ ಬಂದಿದ್ದರು. ಬಾಲಕನ ಕಿವಿಯಲ್ಲಿ ಕಲ್ಲಿನ ಚೂರು ಹೊಕ್ಕಿರುವುದಾಗಿ ಹೇಳಿ ಚಿಕಿತ್ಸೆಗಾಗಿ ಬಾಲಕನನ್ನು ಕರೆದುಕೊಂಡು ಬಂದಿದ್ದರು. ಈ ವೇಳೆಯಲ್ಲಿ ಕಿವಿ ನೋವಿನಿಂದ ಯಾತನೆ ಪಡುತ್ತಿದ್ದ ಬಾಲಕನ ಚಿಕಿತ್ಸೆಗೆ ಮುಂದಾಗದೆ ಡಾ.ವೇಣುಗೋಪಾಲ್ ಅವ್ರು ಮೊಬೈಲ್ ಸಂಭಾಷಣೆಯಲ್ಲಿ ನಿರತರಾಗಿದ್ದರು.
ಚಿಕಿತ್ಸೆಗೆ ಹಲವು ಸಲ ಕೇಳಿಕೊಂಡ್ರೂ ಮುಂದಾಗದ ಡಾ.ವೇಣುಗೋಪಾಲ್ ಅವರ ಜೊತೆಗೆ ರೋಗಿಯ ಪೋಷಕರು ವಾಗ್ವಾದಕ್ಕೆ ಇಳಿದಿದ್ದಾರೆ. ನಂತ್ರ ಅಲ್ಲಿದ್ದ ಕೆಲವ್ರ ಮಧ್ಯಸ್ಥಿತಿಕೆಯಿಂದಾಗಿ ವಾತಾವರಣ ತಿಳಿಗೊಂಡ ಮೇಲೆ ಬಾಲಕನಿಗೆ ಚಿಕಿತ್ಸೆ ಕೊಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕರೂ ಆಗಿರುವ ಡಾ.ವೇಣುಗೋಪಾಲ್ ಅವ್ರು ಸಾರ್ವಜನಿಕರ ಜೊತೆಗೆ ನಡೆದುಕೊಂಡಿರುವ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರೋಗಿಯ ಪೋಷಕರ ಜೊತೆಗೆ ಮಾನವೀಯತೆಯಿಂದ ವರ್ತಿಸಬೇಕಾಗಿತ್ತು ಅನ್ನೋ ಅಭಿಪ್ರಾಯ ಕೇಳಿ ಬಂದಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.