Saturday, May 4, 2024

ಲೋಕಸಭಾ ಚುನಾವಣೆ: ಏ.26 ನಾಳೆ 13 ರಾಜ್ಯಗಳ 88 ಕ್ಷೇತ್ರಗಳಿಗೆ ಮತದಾನ

ದೆಹಲಿ: ದೇಶದಲ್ಲಿ 2024ರ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕ ಸೇರಿ 13 ರಾಜ್ಯಗಳ 88 ಸಂಸದೀಯ ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮನೆ-ಮನೆ ಪ್ರಚಾರಕ್ಕೆ ಅಭ್ಯರ್ಥಿಗಳು ಅಣಿಯಾಗಿದ್ದಾರೆ.

ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಏಪ್ರಿಲ್​ 19ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಚುನಾವಣೆ ಮುಗಿದಿದೆ. ಶುಕ್ರವಾರ ಒಟ್ಟು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಅಭ್ಯರ್ಥಿ ಅಶೋಕ್ ಭಾಲವಿ ಏಪ್ರಿಲ್ 9ರಂದು ನಿಧನ ಹೊಂದಿದ್ದಾರೆ. ಆದ್ದರಿಂದ ಚುನಾವಣಾ ಆಯೋಗವು ಈ ಕ್ಷೇತ್ರದ ಚುನಾವಣೆಯನ್ನು ಮೇ 7ಕ್ಕೆ (ಮೂರನೇ ಹಂತ) ಮುಂದೂಡಿದೆ.

ಇದನ್ಮೂ ಓದಿ: ರಾಜ್ಯದಲ್ಲಿ ಏ.26 ರಂದು ಮೊದಲ ಹಂತದ ಚುನಾವಣೆ: ಪ್ರವಾಸಿ ತಾಣಗಳು ಬಂದ್

ಯಾವ ರಾಜ್ಯ, ಎಷ್ಟು ಕ್ಷೇತ್ರ?: ಎರಡನೇ ಹಂತದಲ್ಲಿ ಕರ್ನಾಟಕದ ಹಳೆ ಮೈಸೂರು, ಬೆಂಗಳೂರು ಭಾಗದ 14 ಲೋಕಸಭೆ ಕ್ಷೇತ್ರಗಳು ಸೇರಿ ದೇಶದ ವಿವಿಧೆಡೆಯ ಒಟ್ಟು 88 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕರ್ನಾಟಕ ಹೊರತುಪಡಿಸಿ ಅಸ್ಸಾಂ-5, ಬಿಹಾರ-5, ಛತ್ತೀಸ್‌ಗಢ-3, ಕೇರಳ-20, ಮಧ್ಯಪ್ರದೇಶ-6, ಮಹಾರಾಷ್ಟ್ರ-8, ಮಣಿಪುರ-1, ರಾಜಸ್ಥಾನ-13, ತ್ರಿಪುರಾ-1, ಉತ್ತರ ಪ್ರದೇಶ-8, ಪಶ್ಚಿಮ ಬಂಗಾಳ-3 ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರಕ್ಕೆ ಮತದಾನ ನಿಗದಿಯಾಗಿದೆ.

ಪ್ರತಿಷ್ಠಿತ ಕ್ಷೇತ್ರಗಳು ಯಾವುವು?: ದೇಶದ ಗಮನ ಸೆಳೆದ ಪ್ರತಿಷ್ಠಿತ ಮತ್ತು ಪ್ರಮುಖ ಕ್ಷೇತ್ರಗಳು ಈ 2ನೇ ಹಂತದಲ್ಲಿ ಮತದಾನಕ್ಕೆ ಅಣಿಯಾಗಿವೆ. ಇದರಲ್ಲಿ ಕರ್ನಾಟಕದ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ, ಬಿಹಾರದ ಕಿಶನ್‌ಗಂಜ್, ಅಸ್ಸಾಂನ ಸಿಲ್ಚಾರ್; ಛತ್ತೀಸ್‌ಗಢದಲ್ಲಿ ಕಂಕೇರ್, ಕೇರಳದ ವಯನಾಡ್, ಕೋಝಿಕ್ಕೋಡ್, ತಿರುವನಂತಪುರಂ, ಮಧ್ಯಪ್ರದೇಶದಲ್ಲಿ ದಾಮೋಹ್ ಮತ್ತು ರೇವಾ; ಮಹಾರಾಷ್ಟ್ರದ ಅಕೋಲಾ, ಅಮರಾವತಿ, ಮಣಿಪುರದ ಹೊರವಲಯ ಮಣಿಪುರ; ರಾಜಸ್ಥಾನದ ಬಾರ್ಮೆರ್, ಕೋಟಾ, ಜಲೋರ್, ಅಜ್ಮೀರ್; ಉತ್ತರ ಪ್ರದೇಶದ ಮಥುರಾ ಮತ್ತು ಅಲಿಗಢ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಬಲೂರ್‌ಘಾಟ್, ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮು ಕ್ಷೇತ್ರ ಸೇರಿದೆ.

RELATED ARTICLES

Related Articles

TRENDING ARTICLES