Sunday, May 5, 2024

ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ನಿಜ : ವಿಜಯೇಂದ್ರ ಸ್ಫೋಟಕ ಹೇಳಿಕೆ

ಚಿತ್ರದುರ್ಗ : ಕಾಂಗ್ರೆಸ್ ಪಕ್ಷದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಫೋಟಕ ಹೇಳಿಕೆ ನೀಡಿದರು.

ಚಿತ್ರದುರ್ಗದ ಜೆಎಂಐಟಿ ಹೆಲಿಪ್ಯಾಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಲೋಕಸಭಾ ಚುನಾವಣೆಗೆ ಹೋಗಲು‌ ಮುಖವಿಲ್ಲ ಎಂದು ಕುಟುಕಿದರು.

ಭಾಗ್ಯಗಳ ಹೆಸರಿನಲ್ಲಿ ಪರಿಶಿಷ್ಟರ ಹಣ ಸಹ ಬಿಟ್ಟಿಲ್ಲ. ಬರೀ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಮಾಡಿದೆ ಎಂಬುದನ್ನೂ ಹೇಳುತ್ತೇವೆ. ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ ಆಗುತ್ತಾರೆ ಎಂಬ ಮಾತುಗಳು ಕೇಳಿ‌ ಬರುತ್ತಿವೆ. ಮೇಲಾಗಿ ಕಾಂಗ್ರೆಸ್ ನಲ್ಲಿಯೇ ಸಿಎಂ ಅವರ ವಿರುದ್ದ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.

800 ರೈತರ ಆತ್ಮಹತ್ಯೆ ನಡೆದಿದೆ

800 ಜ‌ನ ರೈತರ ಆತ್ಮಹತ್ಯೆ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ವಿಚಾರ ಜನರಿಗೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ‌ ಮೋದಿ 10 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರಜೋಳ ಗೆಲುವು ನಿಶ್ಚಿತ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ರಾಜ್ಯದ ಹಿರಿಯ‌ರು. ಅವರು ಕ್ಷೇತ್ರಕ್ಕೆ ಹೊರಗಿನವರು ಎಂಬ ಪ್ರಶ್ನೆ ಬರಲ್ಲ. ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ಗೋವಿಂದ ಕಾರಜೋಳ ಅವರು ಖಂಡಿತವಾಗಿಯೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

RELATED ARTICLES

Related Articles

TRENDING ARTICLES