Wednesday, May 22, 2024

KSRTC ಬಸ್​ನಲ್ಲಿ ‘ಲವ್ ಬರ್ಡ್ಸ್’ಗೆ ಟಿಕೆಟ್ : 4 ಪಕ್ಷಿಗಳಿಗೆ ಬರೋಬ್ಬರಿ 444 ರೂ. ಚಾರ್ಜ್!

ಬೆಂಗಳೂರು : ಬಸ್​ಗಳಲ್ಲಿ ಪಕ್ಷಿಗಳಿಗೆ ಅವಕಾಶ ಇಲ್ಲ ಎಂದ ಕಂಡಕ್ಟರ್. ಪಕ್ಷಿಗಳಿಲ್ಲದೆ ನಾವು ಊರಿಗೆ ಹೋಗಲ್ಲ ಎಂದು ಪಟ್ಟು ಹಿಡಿದ ಮೊಮ್ಮಗಳು. ಶತಾಯಗತಾಯ ಕೊನೆಗೆ ಲವ್​ ಬರ್ಡ್ಸ್​ಗೆ ಪೂರ್ಣ ಟಿಕೆಟ್ ನೀಡಿ ಊರಿನತ್ತ ಪ್ರಯಾಣ ಬೆಳೆಸಿದ ಅಜ್ಜಿ ಮತ್ತು ಮೊಮ್ಮಗಳು.

ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ನಾಲ್ಕು ಲವ್ ಬರ್ಡ್ಸ್​ಗಳಿಗೆ ಕಂಡಕ್ಟರ್ ಹರಿದಿದ್ದು ಬರೋಬ್ಬರಿ 444 ರೂ. ಟಿಕೆಟ್!

ಬೆಳಗ್ಗೆ 8.20ರ ಸುಮಾರಿಗೆ ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳು ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧಾರ್ ಕಾರ್ಡ್ ತೋರಿಸಿ, ಇಬ್ಬರೂ ಫ್ರೀ ಟಿಕೆಟ್ ಪಡೆದಿದ್ದರು. ಆದರೆ, ಮೊಮ್ಮಗಳ ಕೈಯಲ್ಲಿದ್ದ ನಾಲ್ಕು ಲವ್ ಬರ್ಡ್ಸ್ ​ಗಮನಿಸಿದ ಕಂಡಕ್ಟರ್​ 444 ರೂ. ಟಿಕೆಟ್ ಹರಿದಿದ್ದಾರೆ.

ಒಂದು ಪಕ್ಷಿಗೆ ತಲಾ 111 ರೂ.

ಟಿಕೆಟ್ ನೋಡಿ ಅಜ್ಜಿ ಒಮ್ಮೆಲೆ ಕಕ್ಕಾಬಿಕ್ಕಿ ಆಗಿದ್ದಾರೆ. ಟಿಕೆಟ್​ನಲ್ಲಿ ನಾಲ್ಕು ಮಕ್ಕಳು ಎಂದು ಕಂಡಕ್ಟರ್ ನಮೂದಿಸಿದ್ದಾರೆ. ಹಕ್ಕಿಗಳಿಗೆ ಮಕ್ಕಳೆಂದು ಪರಿಗಣಿಸಿ ಒಂದು ಪಕ್ಷಿಗೆ ತಲಾ 111 ರೂ. ನಂತೆ ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಬರೆದಿದ್ದಾರೆ. ಕಂಡಕ್ಟರ್ ಕೊಟ್ಟ ಟಿಕೆಟ್​ನಂತೆ ದುಡ್ಡು ಕೊಟ್ಟು ಅಜ್ಜಿ ಮತ್ತು ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ.

ಒಟ್ನಲ್ಲಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಂತೆ ಅಜ್ಜಿ-ಮೊಮ್ಮಗಳಿಗೆ ಉಚಿತ ಪ್ರಯಾಣ ಸಿಕ್ಕರೆ, ‘ಲವ್ ಬರ್ಡ್ಸ್’ಗಳಿಗೆ ದುಡ್ಡು ಕೊಟ್ಟು ಟಿಕೆಟ್ ಪಡೆಯುವಂತಾಗಿದೆ.

RELATED ARTICLES

Related Articles

TRENDING ARTICLES