Sunday, May 5, 2024

ಬ್ರಹ್ಮ ಬಂದು ಬೇಡ ಅಂದ್ರು ಚುನಾವಣೆಗೆ ನಿಲ್ತೀನಿ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಬ್ರಹ್ಮ ಬಂದು ಬೇಡ ಎಂದು ಹೇಳಿದರೂ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಪಕ್ಷದ ವಿರುದ್ಧವೇ ಬಂಡಾಯವೆದ್ದಿರುವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ನಿರ್ಧಾರ ಕೈಗೊಂಡಿರುವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೂಡ ಮಾಡಿರುವೆ ಎಂದು ಹೇಳಿದ್ದಾರೆ.

ಎಲ್ಲಾ ಕಡೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅದೃಶ್ಯದ ಮತಗಳೆಲ್ಲ ನನಗೆ ಖಂಡಿತ ಸಿಗುತ್ತವೆ. ವಿಶೇಷವಾಗಿ ಜೆಡಿಎಸ್, ಕಾಂಗ್ರೆಸ್, ರಾಷ್ಟ್ರಭಕ್ತ ಮುಸ್ಲಿಂರ ಮತಗಳು ಕೂಡ ನನಗೆ ಸಿಗುತ್ತವೆ. ನಾನು ಗೆದ್ದು ಮತ್ತೆ ಬಿಜೆಪಿಯಲ್ಲಿ ಗುರುತಿಸಿಕೊಂಡು ಮೋದಿಯವರು ಪ್ರಧಾನಿಯಾಗಲು ನೆರವಾಗುತ್ತೇನೆ ಎಂದು ತಿಳಿಸಿದ್ದಾರೆ.

ಟಿಕೆಟ್ ಕೊಡಿಸುತ್ತೇನೆ, ಗೆಲ್ಲಿಸುತ್ತೇನೆ ಅಂದಿದ್ರು

ಅನೇಕ ವರ್ಷಗಳ ಕಾಲ ಹಿಂದೂತ್ವದ ಬಗ್ಗೆ ಹೋರಾಟ ಮಾಡಿದವರನ್ನೇ ಯಡಿಯೂರಪ್ಪ ಕುಟುಂಬ ಕಡೆಗಾಣಿಸುತ್ತಿದೆ. ಸಿ.ಟಿ.ರವಿ, ಯತ್ನಾಳ್, ಸದಾನಂದ ಗೌಡ, ಪ್ರತಾಪ್ ಸಿಂಹ ಮುಂತಾದವರನ್ನೆಲ್ಲ ಕೈಬಿಟ್ಟಿದ್ದು ಯಾಕೆ? ಕಾಂತೇಶ್‍ರವರನ್ನು ದೆಹಲಿಗೆ ಕರೆದುಕೊಂಡು ಬಾ, ನಾನು ಟಿಕೆಟ್ ಕೊಡಿಸುತ್ತೇನೆ, ಗೆಲ್ಲಿಸುತ್ತೇನೆ ಎಂದು ಯಡಿಯೂರಪ್ಪನವರು ಹೇಳಿದ್ದರು. ಆದರೆ, ಹಾಗೆ ಮಾಡಲಿಲ್ಲ. ಶೋಭಕ್ಕನನ್ನು ದೆಹಲಿ ಕರೆದುಕೊಂಡು ಹೋಗಿ ಇವರು ಸೀಟು ಕೊಡಿಸಿದ್ದರೇನು? ಎಂದು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯ ಕಾರ್ಯಕರ್ತರ ಪಾಡೇನು?

ಕುಟುಂಬ ರಾಜಕಾರಣ ಸ್ಪಷ್ಟವಾಗಿ ಮೋದಿಯವರು ವಿರೋಧಿಸಿದ್ದರು. ಒಂದು ಕುಟುಂಬಕ್ಕೆ ಒಂದೇ ಸ್ಥಾನ ಎಂದು ಕೂಡ ಹೇಳಿದ್ದರು. ಆದರೆ, ಅವರ ಮಾತನ್ನು ಮೀರಿ ಬಿ.ಎಸ್.ಯಡಿಯೂರಪ್ಪನವರು ನಡೆದುಕೊಂಡಿದ್ದಾರೆ. ಒಬ್ಬ ಮಗ ಸಂಸದ, ಮತ್ತೊಬ್ಬ ಮಗ ಶಾಸಕ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಸ್ವತಃ ಯಡಿಯೂರಪ್ಪನವರೇ ಬಿಜೆಪಿ ಕಾರ್ಯಕಾರಿಣಿ ರಾಷ್ಟ್ರೀಯ ಸಮಿತಿಯ ಸದಸ್ಯರು. ಹೀಗಿರುವಾಗ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES